ಉಬರಡ್ಕದಲ್ಲೇ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಪ್ರಯತ್ನ ಸ್ಥಳೀಯಾಡಳಿತ ಜಾಗ ಗುರುತಿಸಲಿ : ಸದಾನಂದ ಮಾವಜಿ
ಸುಳ್ಯದ ಎನ್.ಎಂ.ಸಿ. ಎನ್.ಸಿ.ಸಿ. ವಿಂಗ್ ಹಾಗೂ ನಿವೃತ್ತ ಸೈನಿಕರಿಗೆ ಗೌರವ

ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅವರ ಕರ್ಮ ಭೂಮಿಯಲ್ಲೇ ಆದರೆ ಅದು ಅವರಿಗೆ ಇನ್ನಷ್ಟು ಗೌರವ ಸಿಕ್ಕಿದಂತಾಗುತ್ತದೆ. ಅದಕ್ಕಾಗಿ ಉಬರಡ್ಕದಲ್ಲೇ ಅವರ ಪ್ರತಿಮೆ ಆಗುವಲ್ಲಿ ಸರಕಾರದ ವತಿಯಿಂದ ನಾವು ಪ್ರಯತ್ನ ಮಾಡುತ್ತೇವೆ. ಸ್ಥಳೀಯಾಡಳಿತ ಸೂಕ್ತ ಜಾಗ ಗುರುತಿಸಬೇಕು ಎಂದು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು.
ಮಾ.೩೧ರಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಉಬರಡ್ಕ ಅಮೈಮಡಿಯಾರು ಶಾಲಾ ವಠಾರದಲ್ಲಿ ನಡೆದ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಮೈಮಡಿಯಾರು ಶಾಲೆಯಲ್ಲಿ ಈ ಬಾರಿ ಅಕಾಡೆಮಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಪ್ರತೀ ವರ್ಷವೂ ನಡೆಯಬೇಕು. ಆ ನಿಟ್ಟಿನಲ್ಲಿ ಈ ಭಾಗದ ಸಂಘ ಸಂಸ್ಥೆಯವರು ನೇತೃತ್ವ ವಹಿಸಿಕೊಂಡರೆ ಅಕಾಡೆಮಿ ವತಿಯಿಂದ ನಾವು ಸಹಕಾರ ನೀಡುತ್ತೇವೆ ಎಂದು ಸದಾನಂದ ಮಾವಜಿಯವರು ಹೇಳಿದರು.
ಮಿತ್ತೂರು ಉಳ್ಳಾಕುಲು ನಾಯರ್ ದೈವಸ್ಥಾನದ ಆಡಳಿತ ಮೊಕ್ತೇಸರ ವೆಂಕಟ್ರಮಣ ಗೌಡ ಕೆದಂಬಾಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇತಿಹಾಸ ವಿಶ್ಷೇಷಕರಾದ ಅರವಿಂದ ಚೊಕ್ಕಾಡಿಯವರು ಉಪನ್ಯಾಸ ನೀಡಿದರು.
ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಸೂಂತೋಡು, ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಜೆಗದ್ದೆ, ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ, ಉಬರಡ್ಕ ಮಿತ್ತೂರು ಜ್ಞಾನಧಾಮ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ದಾಮೋದರ ಗೌಡ ಮದುವೆಗದ್ದೆ, ಉಬರಡ್ಕ ಗ್ರಾ.ಪಂ. ಉಪಾಧ್ಯಕ್ಷೆ ಚಿತಾ ಪಾಲಡ್ಕ, ಮಂಗಳೂರು ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನಾ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯ ಸುರೇಶ್ ಎಂ.ಹೆಚ್., ಅಮೈಮಡಿಯಾರು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಅಮೈಮಡಿಯಾರು ವಿನಾಯಕ ಮಿತ್ರ ಬಳಗದ ಅಧ್ಯಕ್ಷ ವಿದ್ಯಾಧರ ಹರ್ಲಡ್ಕ, ನಿವೃತ್ತ ಸೈನಿಕ ಅಡ್ಡಂತಡ್ಕ ದೇರಣ್ಣ ಗೌಡ, ಶಾಲಾ ಮುಖ್ಯೋಪಾಧ್ಯಾಯಿನಿ ರಾಮಕ್ಕ ವೇದಿಕೆಯಲ್ಲಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಅಮೈಮಡಿಯಾರು ಶಾಲಾ ದ್ವಾರದ ಬಳಿ ಕೆದಂಬಾಡಿ ರಾಮಯ್ಯ ಗೌಡರ ಹೋರಾಟ ಕುರಿತಾಗಿ ಚಿತ್ರಿಸಲಾದ ಉಬ್ಬು ಚಿತ್ರದ ಬಳಿ ಕೆದಂಬಾಡಿ ರಾಮಯ್ಯ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಬಳಿಕ ಸುಳ್ಯ ಎನ್ನೆಂಸಿ ಎನ್‌ಸಿಸಿ ವಿಂಗ್ ಹಾಗೂ ನಿವೃತ್ತ ಸೈನಿಕರಿದ್ದು ದ್ವಾರದ ಬಳಿಯಿಂದ ಸಭಾ ವೇದಿಕೆಯ ತನಕ ಮೆರವಣಿಗೆಯಲ್ಲಿ ಎಲ್ಲರೂ ತೆರಳಿದರು. ಅಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಎನ್.ಎಂ.ಸಿ. ಎನ್.ಸಿ.ಸಿ. ವಿಂಗ್ ಹಾಗೂ ನಿವೃತ್ತ ಸೈನಿಕರನ್ನು ಗೌರವಿಸಲಾಯಿತು.



ಸವಿತಾ ಸಂದೇಶ್ ನಡುಮುಟ್ಲು ಪ್ರಾರ್ಥಿಸಿದರು. ಕಾರ್ಯಕ್ರಮ ಸದಸ್ಯ ಸಂಯೋಜಕರಾದ ಚಂದ್ರಶೇಖರ ಪೇರಾಲು ಸ್ವಾಗತಿಸಿದರು. ಅಕಾಡೆಮಿ ಸದಸ್ಯೆ ಚಂದ್ರಾವತಿ ಬಡ್ಡಡ್ಕ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರ್ವಹಿಸಿದರು.