ರಮಳಾನಿನಲ್ಲಿ ಗಳಿಸಿದ ಆತ್ಮೀಯ ಚೈತನ್ಯವು ತಪ್ಪುಗಳಿಂದ ವಿಮುಕ್ತಿ ಹೊಂದಲು ಹೇತುವಾಗಲಿ: ಎಲಿಮಲೆಯಲ್ಲಿ ಈದ್ ಸಂದೇಶದಲ್ಲಿ ಕುಂಜಿಲಂ ತಂಙಳ್ ಕರೆ

0

ಪವಿತ್ರ ರಮಳಾನ್ ತಿಂಗಳಲ್ಲಿ ನಮಾಜು, ಉಪವಾಸ, ದಾನ ಧರ್ಮಗಳ ಮೂಲಕ ಗಳಿಸಿದ ಆತ್ಮೀಯ ಚೈತನ್ಯವನ್ನು ಎಲ್ಲಾ ರೀತಿಯ ಕೆಡುಕುಗಳಿಂದ ಮುಕ್ತವಾದ ಜೀವನ ನಡೆಸಲು ಸದುಪಯೋಗಪಡಿಸಿಕೊಳ್ಳಬೇಕೆಂದು ಖ್ಯಾತ ಆತ್ಮೀಯ ಮುಸ್ಲಿಂ ಗುರುಗಳೂ ಎಲಿಮಲೆ ಮುದರ್ರಿಸರೂ ಆದ ಬಹುಮಾನ್ಯರಾದ ಸೈಯದ್ ಅಲವಿ ಕೋಯ ಅಲ್ ಬುಖಾರಿ ಕುಂಜಿಲಂ ತಂಙಳ್ ಕರೆ ನೀಡಿದರು..
ಅವರು ಎಲಿಮಲೆ ಜುಮಾ ಮಸೀದಿಯಲ್ಲಿ ಜರಗಿದ ಈದ್ ನಮಾಜಿನ ಬಳಿಕ ನೀಡಿದ ಈದ್ ಸಂದೇಶದಲ್ಲಿ ಮಾತನಾಡಿದರು.

ಈದ್ ಸಂಭ್ರಮದಲ್ಲಿ ಸಂತೋಷದ ಜೊತೆಗೆ ದೈವ ಸ್ಮರಣೆಯ ಮೂಲಕ ಪರಮಾತ್ಮನ ಸಾಮೀಪ್ಯ ಗಳಿಸುವ ಪ್ರಯತ್ನವನ್ನೂ ಮಾಡುವಂತಾಗಬೇಕು.. ಅಲ್ಲಾಹನು ವಿರೋಧಿಸಿದ ಮಧ್ಯ, ತಂಬಾಕು, ಲಹರಿ ವಸ್ತುಗಳ ಉಪಯೋಗದಿಂದ ಇತ್ತೀಚೆಗೆ ಸಮಾಜದಲ್ಲಿ ದುಷ್ ಕೃತ್ಯಗಳು ಹೆಚ್ಚುತ್ತಿದೆ..
ಇಂತಹ ಪಿಡುಗುಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಿ ಜೀವನವನ್ನು ಸಂಶುದ್ಧವಾಗಿರಿಸಿಕೊಂಡು ನವ ಜೀವನದೆಡೆಗೆ ಹೊಸ ಹೆಜ್ಜೆಯಿರಿಸಲು ಈದ್ ಮುನ್ನುಡಿಯಾಗಬೇಕು.
ಉತ್ತಮ ಧಾರ್ಮಿಕ ಪ್ರಜ್ಞೆಯೊಂದಿಗೆ ಧಾರ್ಮಿಕ ನಿಯಮಗಳನ್ನು ಯಥಾವತ್ತಾಗಿ ಪಾಲಿಸುತ್ತಾ ಜೀವನವನ್ನು ಪಾವನಗೊಳಿಸಬೇಕೆಂದು ಕರೆ ನೀಡಿದರು.
ಮನುಕುಲದ ಶಾಂತಿಗಾಗಿ ಮತ್ತು ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು..
ಈ ಸಂಧರ್ಭದಲ್ಲಿ ಸಹ ಮುದರ್ರಿಸ್ ಹಾರಿಸ್ ಸುರೈಜಿ ಸಖಾಫಿ, ಸದರ್ ಮುಅಲ್ಲಿಂ ಫೈಝಲ್ ಸಖಾಫಿ, ಜೀರ್ಮುಕಿ ಇಮಾಮರಾದ ಅಶ್ರಫ್ ಜೌಹರಿ ಕುಂಭಕೋಡು,
ಖಾದಿಂ ಮುಸ್ತಫಾ ಹಿಶಾಮಿ,ಜಮಾಅತ್ ಅಧ್ಯಕ್ಷ ಅಬ್ದುಲ್ ಕಾದರ್ ಪಾಣಾಜೆ, ಕಾರ್ಯದರ್ಶಿ ಇಬ್ರಾಹಿಂ ಜೀರ್ಮುಕಿ, ಕೋಶಾಧಿಕಾರಿ ಅಬ್ದುಲ್ಲ ಜಿ.ಎಸ್.
ಜೀರ್ಮಕಿ ಮಸೀದಿ ಅಧ್ಯಕ್ಷ ಹಸನ್ ಹರ್ಲಡ್ಕ, ಜಮಾಅತ್ ಕಮಿಟಿ ಮಾಜಿ ಅಧ್ಯಕ್ಷ ರಾದ ಮಹಮದ್ ಇಕ್ಬಾಲ್ ಎಲಿಮಲೆ, ಮೂಸಹಾಜಿ, ಹಿರಿಯಾರಾದ ಅಬೂಬಕರ್ ಪಾಣಾಜೆ, ಮಹಮದ್ ಕುಂಞಿ ಮೇಲೆಬೈಲು, ಅಬ್ದುಲ್ಲ ಹಾಜಿ ಬಟ್ರಬಯಲು, ಹರ್ಲಡ್ಕ ಮಹಮದ್ ಹಾಜಿ, ಸೇರಿದಂತೆ ನೂರಾರು ಬಾಂಧವರು ಭಾಗವಹಿಸಿದರು..
ಈದ್ ನಮಾಜು ಹಾಗೂ ಖುತ್ಬಾ ಬಳಿಕ ಹಸ್ತಲಾಘವ ಮತ್ತು ಆಲಿಂಗನದ ಮೂಲಕ ಪರಸ್ಪರ ಈದ್ ಶುಭಾಶಯಗಳನ್ನು ಹಂಚಿಕೊಂಡು ಸಂಭ್ರಮಿಸಿದರು..
ಸಮಾಜ ಭಾಂಧವರ,
ಗೆಳೆಯರ,ಕುಟುಂಬಸ್ಥರ ಮನೆಗಳಿಗೆ ತೆರಳಿ ಹಬ್ಬದ ಶುಭಾಶಯಗಳ ವಿನಿಮಯದ ಜತೆಗೆ ಪರಸ್ಪರ ಸಂಭಂದಗಳನ್ನು ಗಟ್ಟಿಗೊಳಿಸುವ ಮೂಲಕ ಎಲ್ಲರೂ ಸಂಭ್ರಮದಿಂದ ಈದ್ ಆಚರಿಸಿದರು.