ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಉಚಿತ ಸ್ಪೋಕನ್ ಹಿಂದಿ ಸರ್ಟಿಫಿಕೇಟ್ ಕೋರ್ಸ್ ಎ. ೮ ರಂದು ಪ್ರಾರಂಭಗೊಂಡಿತು.
ಕಾರ್ಯಕ್ರಮವನ್ನು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ದೇವಕಿ ಪ್ರಸನ್ನ ಜಿ. ಎಸ್ ಇವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತೀಶ್ ಕುಮಾರ್ ಕೆ ಆರ್ ಇವರು ವಹಿಸಿದ್ದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀ. ರಾಮಕೃಷ್ಣ. ಕೆ. ಎಸ್ ರವರು ಹಿಂದಿ ಕಲಿತರೆ ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಯುವುದರ ಜೊತೆಗೆ ಭಾರತದಾದ್ಯಂತ ನೌಕರಿ ಪಡೆಯಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ದೇವಕಿ ಪ್ರಸನ್ನ ರವರು, ಹಿಂದಿ ಭಾಷೆ ವಿಪುಲ ಉದ್ಯೋಗ ಅವಕಾಶಗಳನ್ನು ಒದಗಿಸುವುದಲ್ಲದೇ ಇಂದಿನ ಜನಾಂಗಕ್ಕೆ ಬಹಳ ಅಗತ್ಯವಾಗಿ ಬೇಕಾದ ಭಾಷೆಯಾಗಿದೆ, ಇದನ್ನು ಕಲಿಯುವುದು ಬಹಳ ಸುಲಭ ಎಂದು ಹೇಳಿದರು.
ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಡಾ. ಪ್ರೀತಿ ಕೆ ರಾವ್ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಪ್ರೊ. ಉದಯಶಂಕರ್ ಹೆಚ್. ಕಾರ್ಯಕ್ರಮಕ್ಕೆ ಶುಭ ಕೋರಿದರು. ಹಿಂದಿ ಸಂಘದ ಅಧ್ಯಕ್ಷೆ ಕುಮಾರಿ ಪಂಚಮಿ ಕೆ ಸ್ವಾಗತಿಸಿದರು, ಹಿಂದಿ ವಿಭಾಗದ ಉಪನ್ಯಾಸಕಿ ಶ್ರೀಮತಿ ಸ್ವಾತಿ ಎಮ್ ವಂದಿಸಿದರು. ದ್ವಿತೀಯ ಬಿ. ಕಾಮ್ ನ ದೀಪ ಕೆ ಎಮ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕೋರ್ಸ್ ನಲ್ಲಿ ಒಟ್ಟು ೬೦ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು ಬಹುತೇಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.