ಧಾರಾಕಾರ ಮಳೆ : ಮತ್ತೆ ಸದ್ದಾಗುತ್ತಿರುವ ಶಾಂತಿನಗರ ಕ್ರೀಡಾಂಗಣ

0

ಮಳೆ ನೀರು ಹಾದು ಹೋಗಲು ಅಳವಡಿಸಿರುವ ದಂಬೆಗಳು ದಿಕ್ಕಾಪಾಲು

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಶಾಂತಿನಗರ ಕ್ರೀಡಾಂಗಣ ಮತ್ತೆ ಸುದ್ದಿಯಾಗುತ್ತಿದೆ.
ಭಾರೀ ಮಳೆಯ ಕಾರಣ ಶಾಂತಿನಗರ ಕ್ರೀಡಾಂಗಣದ ದಕ್ಷಿಣ ಭಾಗಕ್ಕೆ ಹಾಕಿದ ಮಣ್ಣು ಅಪಾರ ಪ್ರಮಾಣದಲ್ಲಿ ಕೊಚ್ಚಿಹೋಗುತ್ತಿದ್ದು ಮತ್ತೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಳೆ ನೀರು ಹೋಗಲು ಪಾತಿಗಳನ್ನು ಅಳವಡಿಸಿದ್ದರೂ ನೀರು ಈ ಪಾತಿಯನ್ನೂ ಮೀರಿ ಧುಮುಕುತ್ತಿದ್ದು ಅಳವಡಿಸಿರುವ ನೀರಿನ ದಂಬೆಗಳು ದಿಕ್ಕಾಪಾಲಾಗಿದೆ.


ಈ ಮಳೆ ಇನ್ನಷ್ಟು ದಿನ ಇದೇ ರೀತಿ ಮುಂದುವರಿದರೆ ಮಣ್ಣು ಕುಸಿಯುವ ಭೀತಿ ಎದುರಾಗಿದೆ. ಅಲ್ಲದೆ ಈ ಭಾಗದಲ್ಲಿ ಹರಿಯುವ ನೀರು ಈಗಾಗಲೇ ಇರುವ ಸಣ್ಣ ತಡೆಗೋಡೆಯನ್ನು ಕೊರೆಯುತ್ತಿದ್ದು ಇದರಿಂದ ತಡೆಗೋಡೆಗೂ ಅಪಾಯವಿದೆ. ಕೆಳಭಾಗದ ಪ್ರದೇಶದಲ್ಲಿ ಮಣ್ಣು ತುಂಬುತ್ತಿದೆ. ಕೆಳಗಿನ ಕಣಿಗಳು ತುಂಬಲು ಕೇವಲ ಒಂದೆರಡು ಅಡಿಗಳಷ್ಟು ಮಾತ್ರ ಬಾಕಿ ಇದ್ದು ಇದೇ ರೀತಿ ಮಳೆ ಮುಂದುವರಿದಲ್ಲಿ ಅಕ್ಕಪಕ್ಕದ ತೋಟಗಳಿಗೆ ಈ ಮಳೆ ನೀರು ತುಂಬುವ ಸಾಧ್ಯತೆಗಳಿವೆ.

ಕಳೆದ ಕೆಲವು ವಾರಗಳ ಮೊದಲು ಇಲ್ಲಿಗೆ ಭೇಟಿ ನೀಡಿದ್ದ ಸುಳ್ಯ ಶಾಸಕರು ತಕ್ಷಣ ತಡೆಗೋಡೆಯನ್ನು ಎತ್ತರಿಸುವ ಕಾರ್ಯವನ್ನು ಆರಂಭಗೊಳಿಸುತ್ತೇವೆ ಎಂದು ಭೇಟಿ ನೀಡಿದ ಶಾಸಕರು, ಸಹಾಯಕ ಆಯುಕ್ತರ ತಂಡ ಭರವಸೆ ನೀಡಿದ್ದರು.