ಜು.9; ಸುಳ್ಯ ಶ್ರೀ ವೆಂಕಟರಮಣ ಸೊಸೈಟಿ ಸೋಮಂತಡ್ಕ ಶಾಖೆ ಉದ್ಘಾಟನೆ

0

ಶ್ರೀವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಸುಳ್ಯ, ಇದರ 22ನೇ ಸೋಮಂತಡ್ಕ ಶಾಖೆಯು ಜು. 9ರಂದು ಬೆಳಗ್ಗೆ 11 ಗಂಟೆಗೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಸೋಮಂತಡ್ಕದಲ್ಲಿನ ಡಿ’ಸೋಜಾ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿ ಉದ್ಘಾಟನೆಯಾಗಲಿದೆ ಎಂದು ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ್‌ ತಿಳಿಸಿದರು.

ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 22ನೇ ಸೋಮಂತಡ್ಕ ಶಾಖೆಯ ಕಚೇರಿಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸುವರು. ಶ್ರೀ ವೆಂ.ಕೆ.ಕೋ.ಆ.ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ ಅಧ್ಯಕ್ಷತೆ ವಹಿಸುವರು. ಭದ್ರತಾ ಕೊಠಡಿಯನ್ನು ವಿ.ಪ.ಸದಸ್ಯ ಕೆ.ಹರೀಶ್ ಕುಮಾರ್, ಗಣಕೀಕರಣವನ್ನು ಪುತ್ತೂರು ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ತ್ರಿವೇಣಿ ರಾವ್ ಕೆ. ಉದ್ಘಾಟಿಸುವರು. ಪ್ರಥಮ ಸಾಲ ಪತ್ರವನ್ನು ಮುಂಡಾಜೆ ಗ್ರಾ.ಪಂ. ಅಧ್ಯಕ್ಷೆ ರಂಜಿನಿ ಆರ್., ಪ್ರಥಮ ಉಳಿತಾಯಖಾತೆ ಪುಸ್ತಕವನ್ನು ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಮಹಾಪೋಷಕಿ ಲೋಕೇಶ್ವರಿ ವಿನಯಚಂದ್ರ, ಪ್ರಥಮ ತಾಲೂಕು ಅಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು ವಿತರಿಸುವರು.

ನಮ್ಮ ಸಂಘವು 1997ರಲ್ಲಿ ಗೌಡರ ಯುವ ಸೇವಾ ಸಂಘ ಸುಳ್ಯದಿಂದ ಪ್ರವರ್ತಿಸಲ್ಪಟ್ಟಿದ್ದು, ಪ್ರಸ್ತುತ 17,596 ಸದಸ್ಯರಿರುವರು. ಸಂಸ್ಥೆಯು ರಾಜ್ಯಮಟ್ಟದ್ದಾಗಿದ್ದು ರಾಜ್ಯದ ವಿವಿಧ ಭಾಗಗಳಲ್ಲಿ 21 ಶಾಖೆ ಹೊಂದಿದೆ. ದ.ಕ. ಜಿಲ್ಲೆಯಲ್ಲಿ 16 ಶಾಖೆ ಹೊಂದಿದೆ. ಬೆಳ್ತಂಗಡಿ ತಾಲೂಕಿನಲ್ಲಿ 5ನೇ ಶಾಖೆಯಾಗಿದ್ದು, ಮುಂದೆ ಮೈಸೂರಿನಲ್ಲೂ ಶಾಖೆ ತೆರೆಯುವ ಚಿಂತನೆಯಿದೆ. ಈ ವರ್ಷ ಬೆಳ್ಳಿಹಬ್ಬ ಸಂಭ್ರಮಾಚರಣೆಯಲ್ಲಿದ್ದು ಈ ನಿಮಿತ್ತ 25 ಶಾಖೆ ಆರಂಭಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಸಂಘದಲ್ಲಿ 163.22 ಕೋಟಿ ರೂ. ಠೇವಣಿ ಇದ್ದು, 151.53 ಕೋಟಿ ಸಾಲಗಳನ್ನು ಸದಸ್ಯರಿಗೆ ವಿತರಿಸಿ, 181.68 ಕೋಟಿ ದುಡಿಯುವ ಬಂಡವಾಳವಿದೆ. 850 ಕೋ.ರೂ. ಮಿಕ್ಕಿ ವಾರ್ಷಿಕ ವ್ಯವಹಾರ ನಡೆಸುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮೈರೈನ್ ನಿವೃತ್ತ ಮುಖ್ಯ ಅಭಿಯಂತ ಡಿ.ಎಂ. ಗೌಡ, ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆ ವೈದ್ಯಕೀಯ ತಜ್ಞರಾದ ಡಾ.ಚಂದ್ರಕಾಂತ್, ಸೋಮಂತಡ್ಕ ಡಿ’ಸೋಜಾ ಕಾಂಪ್ಲೆಕ್ಸ್ ಮಾಲಕ ಹೆನ್ರಿ ಡಿ’ಸೋಜಾ ಭಾಗವಹಿಸಲಿರುವರು ಎಂದರು.

ಉಪಾಧ್ಯಕ್ಷ ಮೋಹನ್‌ರಾಂ ಸುಳ್ಳಿ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ, ನಿರ್ದೇಶಕ ಪಿ.ಎಸ್. ಗಂಗಾಧರ ಉಪಸ್ಥಿತರಿದ್ದರು.