ಆ.30 ರಂದು ಕಾಂಗ್ರೆಸ್ ನೇತೃತ್ವದಲ್ಲಿ ಜಾಲ್ಸೂರಿನಿಂದ ಸುಳ್ಯದವರೆಗೆ ಸ್ವಾತಂತ್ರ್ಯದ ನಡಿಗೆ

0

 

 

ಸ್ವಾತಂತ್ರ್ಯದ ಅಮೃತಮಹೋತ್ಸವ ಪ್ರಯುಕ್ತ ರಾಜ್ಯಾದ್ಯಂತ ಕಾಂಗ್ರೆಸ್ ನೇತೃತ್ವದಲ್ಲಿ ಸ್ವಾತಂತ್ರ್ಯ ದ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಆ.30 ರಂದು ಜಾಲ್ಸೂರಿನಿಂದ ಸುಳ್ಯದವರೆಗೆ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಂಡಿರುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರು ಹೇಳಿದ್ದಾರೆ.

ಆ.27 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಕರೆದು ಅವರು ಕಾರ್ಯಕ್ರಮದ ವಿವರ ನೀಡಿದರು.

 

ಸ್ವಾತಂತ್ರ್ಯಕ್ಕಾಗಿ 1837 ರಿಂದಲೇ ಹೋರಾಟ ಆರಂಭಗೊಂಡಿದೆ.‌ ಕೆದಂಬಾಡಿ ರಾಮಯ್ಯ ಗೌಡರಿಂದ ಆರಂಭಗೊಂಡು ಹಲವು ನಾಯಕರು ಶ್ರಮಿಸಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡಾ ಸ್ವಾತಂತ್ರ್ಯಕ್ಕಾಗಿ ದುಡಿದಿದೆ. ಮಹಾತ್ಮ ಗಾಂಧೀಜಿಯಾದಿಯಾಗಿ ಹಲವು ನಾಯಕರ ಶ್ರಮದಿಂದ ದೇಶಕ್ಕೆ 75 ವರ್ಷಗಳ ಹಿಂದೆ ಸ್ವಾತಂತ್ರ್ಯ ದೊರೆತಿದ್ದು ಇಂದು ನಾವು ಅಮೃತಮಹೋತ್ಸವ ಆಚರಣೆಯಲ್ಲಿದ್ದೇವೆ. ಸ್ವಾತಂತ್ರ್ಯ ದ ಚರಿತ್ರೆಯನ್ನು ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷ ರಾಜ್ಯದಾದ್ಯಂತ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 75 ಕಿ.ಮೀ ನಡಿಗೆ ಆಯೋಜಿಸಿದ್ದೇವೆ. ಜಾಲ್ಸೂರಿನಿಂದ – ಸುಳ್ಯದವರೆಗೆ ಆ.30 ರಂದು ಸ್ವಾತಂತ್ರ್ಯ ನಡಿಗೆ ನಡೆಯಲಿದ್ದು ತಾಲೂಕಿನ ಎಲ್ಲ ಗ್ರಾಮಗಳಿಂದಲೂ ಸೇರಿ 2 ಸಾವಿರ ಮಂದಿ ಈ ನಡಿಗೆಯಲ್ಲಿ ಭಾಗವಹಿಸಲಿದ್ದಾರೆ. ದೇಶಾಭಿಮಾನ ಇರುವ ಎಲ್ಲರೂ ಇದರಲ್ಲಿ ಭಾಗವಹಿಸಬಹುದು. ನಡಿಗೆ ಪಕ್ಷದ ನೇತೃತ್ವದಲ್ಲಿ ನಡೆದರೂ ಪಕ್ಷದ ಧ್ಚಜ ಇರುವುದಿಲ್ಲ. ಬದಲಾಗಿ ರಾಷ್ಟ್ರಧ್ವಜ ಹಾಗೂ ಗಾಂಧೀ ಟೋಪಿ ತೊಟ್ಟು ನಡಿಗೆ ನಡೆಯಲಿದೆ ಎಂದು ಹೇಳಿದರು.

ಜಾಲ್ಸೂರಿನಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ನಡಿಗೆಗೆ ಚಾಲನೆ ನೀಡುವರು. ನಾಯಕರಾದ ಯು ಟಿ ಖಾದರ್, ರಮಾನಾಥ ರೈ, ಮಿಥುನ್ ರೈ, ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ಶಕುಂತಲಾ ಶೆಟ್ಟಿ ಭಾಗವಹಿಸುವರು.

 

ನಡಿಗೆ ಸುಳ್ಯಕ್ಕೆ ತಲುಪಿದ ಬಳಿಕ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಸಭೆ ನಡೆಯಲಿದ್ದು ಕೊಪ್ಪ ಬ್ಲಾಕ್ ಅಧ್ಯಕ್ಷ ಸುಧೀರ್ ಕುಮಾರ್ ಮರೋಳಿ ಸಮಾರೋಪ ಭಾಷಣ ಮಾಡುವರು ಎಂದು ಹೇಳಿದರು.

ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ ಮಾತನಾಡಿ, ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮದ ಕಾಲ ಇದು. ಸ್ವಾತಂತ್ರ್ಯದ ಚರಿತ್ರೆಯನ್ನು ಜನಜಾಗೃತಿಯಾಗಿ ಮಾಡುವ ಕರ್ತವ್ಯ ನಮ್ಮ ಮೇಲಿದೆ. ಈಗಿನ‌ ಸರಕಾರ ಸಂವಿಧಾನವನ್ನೇ ತಿರುಚಲು ಕೈ ಹಾಕಿದೆ. ಜನರ ವಾಕ್ ಸ್ವಾತಂತ್ರ್ಯ ವನ್ನು ಹತ್ತಿಕ್ಕುವ ಕೆಲಸ ಮಾಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯವನ್ನು ಉಳಿಸುವ ಹೋರಾಟ ಹಾಗೂ ಇತಿಹಾಸವನ್ನು ಈಗಿನ ಜನಾಂಗಕ್ಕೆ ಧಾರೆ ಎಳೆಯಲಾಗುವುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಪ್ರಮುಖರಾದ ಕೃಷ್ಣಪ್ಪ, ನಂದರಾಜ ಸಂಕೇಶ, ಸುರೇಶ್ ಅಮೈ, ಗೀತಾ ಕೋಲ್ಚಾರ್, ಧರ್ಮಪಾಲ ಕೊಯಿಂಗಾಜೆ, ತಿರುಮಲೇಶ್ವರ ಬೊಳ್ಳೂರು, ಆಶಿಶ್ ಕೃಷ್ಣಪ್ಪ, ಜಯಂತಿ ಆಲೆಟ್ಟಿ, ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ ಇದ್ದರು.