ಕುಮಾರಧಾರಾದಲ್ಲಿ ಯಾತ್ರಾರ್ಥಿ ಹೃದಯಾಘಾತದಿಂದ ನಿಧನ, ಮೃತರ ಕುಟುಂಬಕ್ಕೆ ಸಹಕಾರ ನೀಡಿದ ರವಿ ಕಕ್ಕೆಪದವು ತಂಡ, ಸುಸಜ್ಜಿತ ಆಸ್ಪತ್ರೆ ಇಲ್ಲದಿರುವುದಕ್ಕೆ ನಾಗರಿಕರ ಆಕ್ರೋಶ

0

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ದಲ್ಲಿ ಯಾತ್ರಾರ್ಥಿಯೊಬ್ಬರು ಹೃದಯಾಘಾತದಿಂದ ಮೃತ ಪಟ್ಟಿದ್ದು, ಸಕಾಲದಲ್ಲಿ ಚಿಕಿತ್ಸೆ ದೊರೆಯುವ ಸುಸಜ್ಜಿತ ಆಸ್ಪತ್ರೆಯೊಂದು ಇಲ್ಲಿ ಇಲ್ಲದಿರುವುದು ಮತ್ತೆ ಆಕ್ರೋಶಕ್ಕೆ ಕಾರಣವಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದ್ದು, ಆದಾಯದಲ್ಲಿ ಕರ್ನಾಟಕದ ನಂ. 1 ದೇವಾಲಯವಾಗಿದೆ. ದಿನವೊಂದಕ್ಕೆ ಸಾವಿರಾರು ಭಕ್ತಾದಿಗಳು ಬಂದು ದೇವರ ದರ್ಶನ ಪಡೆಯುತ್ತಾರೆ. ಆದರೆ ಇಲ್ಲಿ ಮೂಲಭೂತ ಸೌಕರ್ಯಗಳೊಂದಾದ ಸುಸಜ್ಜಿತವಾದ 24 ಗಂಟೆಯೂ ತುರ್ತು ಸೇವೆ ನೀಡಲು ಆಸ್ಪತ್ರೆ ಸೌಲಭ್ಯವೇ ಇಲ್ಲದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯದ ನಾಗರಿಕರು, ಹಲವು ಸಂಘ ಸಂಸ್ಥೆಗಳು ಸುಸಜ್ಜಿತ ಆಸ್ಪತ್ರೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡುತ್ತಲೇ ಇದ್ದಾರೆ. ಇವರ ಕೂಗು ಜನಪ್ರತಿನಿಧಿಗಾಗಲೀ, ಅಧಿಕಾರಿಗಳಿಗಾಗಲೀ ಮುಟ್ಟಲೇ ಇಲ್ಲ.

ಇಂದು ಮುಂಜಾನೆ ಬೆಂಗಳೂರಿನ ಯಾತ್ರಾರ್ಥಿ ನಾಗಣ್ಣ ಎಂಬವರಿಗೆ ಕುಮಾರಾಧಾರದಲ್ಲಿ ಸ್ನಾನಕ್ಕೆಂದು ಬಂದಿರುವಾಗ ಹೃದಯಾಘಾತವಾಗಿದೆ. ತಕ್ಷಣ ವಿಷಯ ಸುಬ್ರಹ್ಮಣ್ಯದ ಉದ್ಯಮಿ ಡಾ. ರವಿಕಕ್ಕೆಪದವುರವರಿಗೆ ತಲುಪಿತು. ಅವರು ರೋಗಿಯನ್ನು ನಿಟ್ಟೆ ಆಸ್ಪತ್ರೆಗೆ ಕರೆ ತಂದರಾದರೂ ಯಾತ್ರಾರ್ಥಿಯ ಜೀವ ಉಳಿಸಲಾಗಲಿಲ್ಲ. ಬಳಿಕ ಮೃತರ ಕುಟುಂಬಕ್ಕೆ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಡಾ. ರವಿಕಕ್ಕೆಪದವು ಮಾಡಿಕೊಟ್ಟರು.

ಸುಬ್ರಹ್ಮಣ್ಯದಲ್ಲಿ ತುರ್ತು ಚಿಕಿತ್ಸೆ ನೀಡಲು ಯಾವುದೇ ವ್ಯವಸ್ಥೆ ಇಲ್ಲದಿರುವುದಿಂದ ಯಾತ್ರಾರ್ಥಿಗಳಿಗೆ ತುರ್ತು ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಸ್ಪಂದಿಸಲಿ ಎಂದು ಮೃತ ನಾಗಣ್ಣರ ಕುಟುಂಬಸ್ಥರು, ಉದ್ಯಮಿ ರವಿ ಕಕ್ಕೆಪದವು, ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಲಲಿತ ಗುಂಡಡ್ಕ ಮನವಿ ಮಾಡಿಕೊಂಡಿದ್ದಾರೆ.