ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆ ಆಗ್ರಹಿಸಿ ಡಿ.19ರಂದು ಬೆಳಗಾವಿಯಲ್ಲಿ ಪ್ರತಿಭಟನೆ, 18 ರಿಂದ ಒಂದು ವಾರ ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ

0

ಗ್ರಾಮ ಪಂಚಾಯತ್‌ಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಸೇವಾ ಭದ್ರತೆ, ವೇತನ ಶ್ರೇಣಿ ಹಾಗು ಇತರ ಸರಕಾರಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಡಿ.19ರಂದು ಬೆಳಗಾವಿಯ ಸುವರ್ಣ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.18ರಿಂದ ಒಂದು ವಾರಗಳ ಕಾಲ ಪಂಚಾಯತ್‌ಗಳಲ್ಲಿ ಕಾರ್ಯನಿರ್ವಹಿಸದೇ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೆಯಾಭಿವೃದ್ಧಿ ಸಂಘದ ಹೋರಾಟ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ತಾಲೂಕು ಅಧ್ಯಕ್ಷೆ ನೇತ್ರಾವತಿ ಕೆ.ಎಚ್. ಗ್ರಾಮ ಪಂಚಾಯತ್‌ನಲ್ಲಿ ಕಾರ್ಯನಿರ್ವಹಿಸುವ ಕ್ಲರ್ಕ್, ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ಅಟೆಂಡರ್, ಪಂಪು ಚಾಲಕರು, ವಾಟರ್ ಮ್ಯಾನ್, ಶುಚಿತ್ವ ನೌಕರರು ಸೇರಿ ಅನುಮೋದನೆಗೊಂಡ ನೌಕರರಿಗೆ ಕಾರ್ಮಿಕ ಇಲಾಖೆ ನಿಗದಿ ಪಡಿಸಿದ ಕನಿಷ್ಠ ವೇತನ ಮಾತ್ರ ನೀಡಲಾಗುತ್ತದೆ. ಕಳೆದ ಮೂರು ದಶಕಗಳಿಂದ ಯಾವುದೇ ವೇತನ ಹೆಚ್ಚಳ, ಸೌಲಭ್ಯಗಳು ಇಲ್ಲದೆ ಇದೇ ರೀತಿ ಕನಿಷ್ಠ ವೇತನದಲ್ಲಿ ಕಾರ್ಯನಿರ್ವಹಿಸಲಾಗುತ್ತದೆ. ನಮಗೆ ಸರಿಯಾದ‌ ವೇತನ, ಇಎಸ್‌ಐ, ಭವಿಷ್ಯ ನಿಧಿ ಸವಲತ್ತು, ವೈದ್ಯಕೀಯ ಸವಲತ್ತು, ಪಿಂಚಣಿ ಸೇರಿ ಯಾವುದೇ ಸರಕಾರಿ ಸೌಲಭ್ಯ ಇರುವುದಿಲ್ಲ. ಆದುದರಿಂದ ಪಂಚಾಯತ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಹುದ್ದೆಗಳಿಗೆ ಅನುಗುಣವಾಗಿ ಸಿ ಮತ್ತು ಡಿ ದರ್ಜೆಯ ಸ್ಥಾನಮಾನದ ವೇತನ ಶ್ರೇಣಿ ಹಾಗು ಇತರ ಸರಕಾರಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೆಯಾಭಿವೃದ್ಧಿ ಸಂಘದ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ದಯಾನಂದ ಮಠತ್ತಡ್ಕ ಮಾತನಾಡಿ ‘ರಾಜ್ಯದಲ್ಲಿ 72 ಸಾವಿರ ನೌಕರರು ಈ ರೀತಿ ಯಾವುದೇ ಭದ್ರತೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ದ.ಕ.ಜಿಲ್ಲೆಯಲ್ಲಿ 1555 ನೌಕರರು ಸುಳ್ಯ ತಾಲೂಕಿನಲ್ಲಿ 103 ನೌಕರರಿದ್ದಾರೆ. ಜಿಲ್ಲೆಯ ಎಲ್ಲಾ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿ ಹಕ್ಕೊತ್ತಾಯ ಮಂಡಿಸಲಿದ್ದಾರೆ. ಅಲ್ಲದೆ 18 ರಿಂದ ಒಂದು ವಾರಗಳ ಕಾಲ ನೌಕರರು ಪ್ರತಿಭಟನಾ ಸೂಚಕವಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಕುಡಿಯುವ ನೀರು ಮತ್ತಿತರ ಅಗತ್ಯ ಸೇವೆಗಳ ನೌಕರರು ಮಾತ್ರ ಕಾರ್ಯನಿರ್ವಹಿಸುವರು ಎಂದು ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಯಶವಂತ್, ತಾಲೂಕು ಕಾರ್ಯದರ್ಶಿ ಗಿರಿಧರ ಕೆ, ಪದಾಧಿಕಾರಿಗಳಾದ ಸೀತಾರಾಮ ಮೊರಂಗಲ್ಲು, ಜನಾರ್ಧನ ಉಬರಡ್ಕ, ಜಯರಾಮ ಕಲ್ಲುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.