ಜ. 21, 22 ರಂದು ಸಂಪಾಜೆ ಸೊಸೈಟಿಯ ಶತಸಂಭ್ರಮ

0


156 ಮಂದಿಗೆ ಸನ್ಮಾನ


ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಸಂಭ್ರಮ ಕಾರ್ಯಕ್ರಮ ಜ. 21 ಮತ್ತು 22ರಂದು ಅದ್ಧೂರಿಯಾಗಿ ನಡೆಯಲಿದ್ದು, ಈ ಸಂದರ್ಭದಲ್ಲಿ ತಾಲೂಕಿ ಮತ್ತು ಒಳಗಿನ ಮತ್ತು ಹೊರಗಿನ ಹಾಗೂ ಸಂಪಾಜೆ ಗ್ರಾಮ ವ್ಯಾಪ್ತಿಯ ಒಟ್ಟು ೧೫೬ ಮಂದಿಗೆ ಸನ್ಮಾನ ನೆರವೇರಿಸಲಾಗುವುದು ಎಂದು ಸಂಪಾಜೆ ಸೊಸೈಟಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ತಿಳಿಸಿದರು. ಇಂದು ಸುಳ್ಯದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮವ ವಿವರ ನೀಡಿದರು. ಜ. 21 ರಂದು ಮೆರವಣಿಗೆ ಮತ್ತು ಧ್ವಜಾರೋಹಣದ ಬಳಿಕ ಶತಮಾನೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಲ್ಲುಗುಂಡಿಯ ಕೂಲಿಶೆಡ್‌ನಿಂದ ಸಮಾರಂಭ ನಡೆಯುವ ದ.ಕ. ಸಂಪಾಜೆ ಉ.ಹಿ.ಪ್ರಾ.ಶಾಲೆಯ ವಠಾರದವರೆಗೆ ಅತ್ಯಂತ ವೈಭವಯುತವಾದ ಸಹಕಾರಿ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಗೆ ಸಹಕಾರ ರತ್ನ ನಿತ್ಯಾನಂದ ಮುಂಡೋಡಿಯವರು ಚಾಲನೆ ನೀಡಲಿದ್ದಾರೆ. ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಧ್ವಜಾರೋಹಣಗೈಯಲ್ಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಗುರುದೇವ ದತ್ತ ಸಂಸ್ಥಾನದ ಯತಿವರ್ಯರಾದ ಗುರುದೇವಾನಂದ ಸ್ವಾಮೀಜಿಯವರು, ಕಲ್ಲುಗುಂಡಿಯ ಸಂತ ಪ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಧರ್ಮಗುರುಗಳಾದ ಫಾವುಲ್ ಕ್ರಾಸ್ತಾ ಹಾಗೂ ಕಲ್ಲುಗುಂಡಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಅಹಮ್ಮದ್ ನಹಿಮ್ ಪೈಝಿ ಆಶೀರ್ವಚನ ಮಾಡಲಿರುವರು.


ಈ ವೇದಿಕೆಯಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಕಿನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರಕುಮಾರ್, ಸಚಿವ ಎಸ್.ಅಂಗಾರ, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತು ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ.ಶ್ಯಾಂ ಭಟ್‌ರನ್ನು ಮತ್ತು ತಾಲೂಕಿನ ೨೦ ಮಂದಿ ಗಣ್ಯರನ್ನು ಬ್ಯಾಂಕಿನ ೫ ಮಂದಿ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು. ಒಟ್ಟು ೯ ಹಂತಗಳಲ್ಲಿ ಸನ್ಮಾನ ಕಾರ್ಯಕ್ರಮ ನೆರವೇರಲಿದ್ದು, ಒಟ್ಟು ೧೫೬ಮಂದಿಯನ್ನು ಸನ್ಮಾನಿಸಲಾಗುವುದು ಎಂದು ಸೋಮಶೇಖರ ಕೊಯಿಂಗಾಜೆ ವಿವರ ನೀಡಿದರು.
ಅಪರಾಹ್ನ ವಿಚಾರಗೋಷ್ಠಿಗಳು, ಹಾಸ್ಯ ಕಾರ್ಯಕ್ರಮಗಳು, ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿರುವುದು. ಮರುದಿನ ಯಕ್ಷಗಾನ ನಾಟ್ಯವೈಭವ, ಗೀತ ಸಾಹಿತ್ಯ ಕಾರ್ಯಕ್ರಮ, ತುಳು ಯಕ್ಷಗಾನ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ನಳಿನ್‌ಕುಮಾರ್ ಕಟೀಲ್, ಮಂಜುನಾಥ ಭಂಡಾರಿ, ಸುಚರಿತ ಶೆಟ್ಟಿ, ಡಾ. ರೇಣುಕಾ ಪ್ರಸಾದ್ ಕೆ.ವಿ. ಮೊದಲಾದವರ ಉಪಸ್ಥಿತರಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿರುವುದು ಎಂದು ಕೊಯಿಂಗಾಜೆ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಸನ್ಮಾನ ಸಮಿತಿ ಸಂಚಾಲಕ ಕೆ.ದಾಮೋದರ ಮಾಸ್ತರ್, ಕಾರ್ಯಕ್ರಮ ಸಂಯೋಜನಾ ಸಮಿತಿ ಸಂಚಾಲಕ ಚಿದಾನಂದ ಯು.ಎಸ್., ಪ್ರಚಾರ ಸಮಿತಿ ಸಂಚಾಲಕ ಹಾಗೂ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ, ವಾಹನ ನಿಲುಗಡೆ ಸಮಿತಿ ಸಂಚಾಲಕ ಮಿಜಾಫರ್ ಅಹಮ್ಮದ್, ಚಪ್ಪರ ಮತ್ತು ಅಲಂಕಾರ ಸಮಿತಿ ಸಂಚಾಲಕ ಗಣಪತಿ ಭಟ್ ಪಿ.ಎನ್., ನಿರ್ದೇಶಕ ಹಮೀದ್ ಹೆಚ್, ಮುಖ್ಯಕಾರ್ಯನುರ್ವಹಣಾಧಿಕಾರಿ ವೀರೇಂದ್ರಕುಮಾರ್ ಜೈನ್ ಉಪಸ್ಥಿತರಿದ್ದರು.