ಡಾ|ಸೋಮಶೇಖರ ರೈ ಕುಂಜಾಡಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0

ವ್ಯಕ್ತಿತ್ವದಿಂದಲೇ ಸಮಾಜದಲ್ಲಿ ಹೆಜ್ಜೆ ಗುರುತು ಮೂಡಿಸಿದವರು : ಉಮೇಶ್ ಕೆಎಂಬಿ

ವೃತ್ತಿ ಹಾಗೂ ಪ್ರವೃತ್ತಿಯ ಕ್ಷೇತ್ರದಲ್ಲಿ ತನ್ನ ಪ್ರಾಮಾಣಿಕ ವ್ಯಕ್ತಿತ್ವದಿಂದಲೇ ಸಮಾಜದಲ್ಲಿ ಹೆಜ್ಜೆ ಗುರುತು ಮೂಡಿಸಿ ಆದರ್ಶಯುತ ಜೀವನ ಸಾಗಿಸಿದ ವ್ಯಕ್ತಿ ಡಾ|ಸೋಮಶೇಖರ ರೈ ಕುಂಜಾಡಿಯವರು ಎಂದು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಹೇಳಿದರು.

ಮುಕ್ಕೂರಿನ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಡಾ|ಸೋಮಶೇಖರ ರೈ ಕುಂಜಾಡಿ ಅವರಿಗೆ ಗುರುವಾರ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು. ಪ್ರಗತಿಪರ ಕೃಷಿಕರಾಗಿಯು ಗುರುತಿಸಿಕೊಂಡಿದ್ದ ಸೋಮಶೇಖರ ರೈ ಅವರು ಸಮಾಜದ ಎಲ್ಲ ವರ್ಗದ ಪ್ರೀತಿಗೆ ಪಾತ್ರರಾಗಿದ್ದರು. ಕೊಡುಗೈ ದಾನಿಯಾಗಿಯು ಸಮಾಜದ ಒಳಿತು ಬಯಸಿದ್ದರು. ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳುವ ಮೂಲಕ ನಿಜಾರ್ಥದಲ್ಲಿ ಅವರನ್ನು ಸ್ಮರಿಸುವ ಕಾರ್ಯ ಮಾಡೋಣ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಕುಂಡಡ್ಕ-ಮುಕ್ಕೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಅರ್ಥಪೂರ್ಣ ವ್ಯಕ್ತಿತ್ವದ ಮೂಲಕ ಬದುಕಿ ಬಾಳಿದ ಡಾ|ಸೋಮಶೇಖರ ರೈ ಅವರು ಸರಕಾರಿ ಅಧಿಕಾರಿಯಾಗಿ ಅತ್ಯಂತ ಪಾರದರ್ಶಕವಾಗಿ ಸೇವೆ ಸಲ್ಲಿಸಿದವರು. ನುಡಿದಂತೆ ನಡೆದ ಸೋಮಶೇಖರ ರೈ ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.

ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ, ಸಮಾಜದಲ್ಲಿ ಒಂದಿಂಚು ಜಾಗವನ್ನು ಬಿಟ್ಟು ಕೊಡಲು ಹಿಂದೆ ಮುಂದೆ ನೋಡುವವರೇ ಹೆಚ್ಚು. ಅಂತಹ ಕಾಲಘಟ್ಟದಲ್ಲಿ ಡಾ.ಸೋಮಶೇಖರ ರೈ ಅವರು ಮುಕ್ಕೂರು ಸರಕಾರಿ ಶಾಲೆ ಹಾಗೂ ಹಾಲಿನ ಡಿಪೋಗೆ ಉಚಿತವಾಗಿ ಜಮೀನು ನೀಡಿದ್ದಾರೆ. ತನ್ಮೂಲಕ ಈ ಊರಿನ ಸಾವಿರಾರು ಮಂದಿಗೆ ಅಕ್ಷರ ಜ್ಞಾನ ಸಿಗುವಲ್ಲಿಯು ಕಾರಣಕರ್ತರಾದರು ಎಂದು ಸ್ಮರಿಸಿದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಮುಕ್ಕೂರು ಜ್ಯೋತಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ ಅವರು ನುಡಿನಮನ ಸಲ್ಲಿಸಿ, ಡಾ|ಸೋಮಶೇಖರ ರೈ ಅವರದ್ದು ಅಪರೂಪದ ವ್ಯಕ್ತಿತ್ವ. ಯಾರೊಂದಿಗೂ ಮನಸ್ತಾಪ ಮಾಡದೆ ಸ್ನೇಹ ಜೀವಿಯಾಗಿ ಬದುಕಿದವರು.ಸಾಮಾಜಿಕ, ಕೌಟುಂಬಿಕ, ವೃತ್ತಿ ಜೀವನವನ್ನು ಆದರ್ಶಯುತವಾಗಿ ನಡೆಸಿ ಮಾದರಿಯಾದವರು ಎಂದರು.

ಶಾಲಾ ಮುಖ್ಯಗುರು ವಸಂತಿ, ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಮಂಜುನಾಥ ರೈ ಕುಂಜಾಡಿ, ಮುಕ್ಕೂರು ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಮೊದಲಾದವರು ಉಪಸ್ಥಿತರಿದ್ದರು. ಸಂಘ ಸಂಸ್ಥೆಗಳ ಪರವಾಗಿ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಸಮಿತಿ ಸದಸ್ಯ ಕುಶಾಲಪ್ಪ ಗೌಡ ಪೆರುವಾಜೆ, ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲದ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್., ಮುಕ್ಕೂರು-ಪೆರುವಾಜೆ ಶಾರದೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ ಹಾಗೂ ಕುಂಜಾಡಿ ಕುಟುಂಬಸ್ಥರು ಉಪಸ್ಥಿತರಿದ್ದರು.