ಅರಂತೋಡು: ಅಡ್ತಲೆ ನಾಗರಿಕ ಹಿತ ರಕ್ಷಣಾ ವೇದಿಕೆ ವತಿಯಿಂದ ವಿವಿಧ ಕಾಮಗಾರಿಗಳ ಲೋಕಾರ್ಪಣೆ – ಅಭಿನಂದನಾ ಸಮಾರಂಭ

0

ಮಾಜಿ ಸಚಿವ ಎಸ್. ಅಂಗಾರ ಹಾಗೂ ನೂತನ ಶಾಸಕಿ ಭಾಗೀರಥಿ ಅವರಿಗೆ ಸನ್ಮಾನ

ಅರಂತೋಡು ಗ್ರಾಮದ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ವಿವಿಧ ಕಾಮಗಾರಿಗಳ ಲೋಕಾರ್ಪಣೆ, ಮಾಜಿ ಸಚಿವ ಎಸ್. ಅಂಗಾರ, ನೂತನ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ನಾಗರಿಕ ಸನ್ಮಾನ ಸಮಾರಂಭವು ಅರಂತೋಡು ಗ್ರಾಮದ ಅಡ್ತಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಜೂ.10ರಂದು ಬೆಳಿಗ್ಗೆ ಜರುಗಿತು.


ಉದ್ಘಾಟನಾ ಸಮಾರಂಭಕ್ಕೂ ಮುನ್ನ ರೂ. ಮೂವತ್ತು ಲಕ್ಷ ರೂ. ಅನುದಾನದಲ್ಲಿ ನಿರ್ಮಾಣ ಮಾಡಲಾದ ಅರಂತೋಡು ಅಡ್ತಲೆ – ಬೆದ್ರುಪಣೆ ಕಾಂಕ್ರೀಟಿಕರಣ ರಸ್ತೆಯನ್ನು ಶಾಸಕಿ ಭಾಗೀರಥಿ ಅವರು ಲೋಕಾರ್ಪಣೆಗೊಳಿಸಿದರು. ಮಾಜಿ ಸಚಿವ ಎಸ್. ಅಂಗಾರರು ತೆಂಗಿನಕಾಯಿ ಒಡೆಯುವುದರ ಮೂಲಕ ನೂತನ ರಸ್ತೆಗೆ ಚಾಲನೆ ನೀಡಿದರು.


ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಅರಂತೋಡಿನಿಂದ ಅಡ್ತಲೆ ಮೂಲಕ ಎಲಿಮಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸುಮಾರು 4.68 ಕೋಟಿ ರೂ. ಅನುದಾನ ಒದಗಿಸಿದ ಮಾಜಿ ಸಚಿವ ಎಸ್. ಅಂಗಾರ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿಯಾಗಿ ಆಯ್ಕೆಯಾಗಿ ರಸ್ತೆ ಲೋಕಾರ್ಪಣೆಗೊಳಿಸಿದ ನೂತನ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರನ್ನು ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಅರಂತೋಡು ಗ್ರಾ.ಪಂ. ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಡ್ತಲೆ ಶಾಲಾ ಆವರಣ ಗೋಡೆಯನ್ನು ಅರಂತೋಡು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ಅವರು ಉದ್ಘಾಟಿಸಿದರು.

ಮಾಜಿ ಸಚಿವ ಎಸ್. ಅಂಗಾರರು ಮಾತನಾಡಿ ‘ಅರಂತೋಡಿನಿಂದ ಅಡ್ತಲೆ ಮರ್ಕಂಜದ ಮೂಲಕ ಎಲಿಮಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಯನ್ನು ಅಭಿವೃದ್ಧಿ ಪಡಿಸಲಾಗಿದೆ. ಸರಕಾರ ಮತ್ತು ಚುನಾಯಿತ ಪ್ರತಿನಿಧಿಗಳು ಸೇರಿಕೊಂಡು ಅಭಿವೃದ್ಧಿಗೆ ಪೂರಕವಾಗಿ ಬೇಕಾದ ವ್ಯವಸ್ಥೆಯನ್ನು ಪ್ರಥಮ ಹಂತದಲ್ಲಿ ಮಾಡಿಕೊಡಬೇಕು. ಆಗ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನಗಳು ಬರುತ್ತದೆ’ ಎಂದು ಹೇಳಿದರು.

ಶಾಸಕಿ ಕು. ಭಾಗೀರಥಿ ಅವರು ಮಾತನಾಡಿ ‘ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ಸವಾಲುಗಳನ್ನು ಸ್ವೀಕರಿಸಿ, ಕೆಲಸ ಮಾಡುತ್ತೇನೆ. ವಿರೋಧ ಪಕ್ಷದಲ್ಲಿದ್ದರೂ, ಕ್ಷೇತ್ರದ ನಾಗರಿಕರ ಧೈರ್ಯ ನನಗಿದೆ. ಆದ್ದರಿಂದ ಎದುರಾಗುವ ಸವಾಲುಗಳನ್ನು ಸ್ವೀಕರಿಸಿ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ರಚನೆ ಮಾಡಿಕೊಂಡು ರಸ್ತೆ ಹೋರಾಟಕ್ಕೆ ಶ್ರಮಿಸಿದ ಮಾಜಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಮಾಜಿ ಸಚಿವ ಎಸ್. ಅಂಗಾರ ಅವರಿಗೆ ಒತ್ತಡ ಹೇರಿ ರಸ್ತೆಗೆ ಅನುದಾನ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಅರಂತೋಡು ಗ್ರಾ.ಪಂ. ಸದಸ್ಯರುಗಳಾದ ಕೇಶವ ಅಡ್ತಲೆ, ಸುಜಯ ಲೋಹಿತ್ ಮೇಲಡ್ತಲೆ ಅವರನ್ನು ಅಭಿನಂದಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಮೂಹ ಸಂಪನ್ಮೂಲ ವ್ಯಕ್ತಿ ಮಮತ, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ, ಮಾಜಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಅರಂತೋಡು – ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಗ್ರಾ.ಪಂ. ಸದಸ್ಯರುಗಳಾದ ಕೇಶವ ಅಡ್ತಲೆ, ಶ್ರೀಮತಿ ಸುಜಯ ಲೋಹಿತ್ ಮೇಲಡ್ತಲೆ, ಗ್ರಾ.ಪಂ‌. ಉಪಾಧ್ಯಕ್ಷೆ ಕು. ಶ್ವೇತ ಅರಮನೆಗಾಯ, ಅಡ್ತಲೆಯ ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ್ ಬೆದ್ರುಪಣೆ, ಅಡ್ತಲೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಿಂಡಿಮನೆ ಉಪಸ್ಥಿತರಿದ್ದರು. ಲೋಹಿತ್ ಅಡ್ತಲೆ ಸ್ವಾಗತಿಸಿ, ಮೋಹನ ಅಡ್ತಲೆ ವಂದಿಸಿದರು. ಕಿಶೋರ್ ಮಾಸ್ತರ್ ಅವರು ಕಾರ್ಯಕ್ರಮ ನಿರೂಪಿಸಿದರು.