ಸುಳ್ಯ ನಗರಕ್ಕೆ ಮಹಾಯೋಜನೆಯ ಅನುಷ್ಠಾನದ ಕುರಿತು ಸಭೆ

0

ನಗರದ ಮಹಾಯೋಜನೆಯಲ್ಲಿ ರಸ್ತೆಗಳು 9 ಮೀಟರ್ ಆಗಲ ಆಗಬೇಕು ಎನ್ನುವ ಕಾನೂನು ಇದೆ. ಸುಳ್ಯದಲ್ಲಿ 9 ಮೀಟರ್ ರಸ್ತೆಗಳನ್ನು ಅಗಲಗೊಳಿಸಿದರೆ ಸ್ಥಳದ ಕೊರತೆ ಮತ್ತು ಸಮಸ್ಯೆಗಳು ಉದ್ಭವವಾಗುತ್ತದೆ. ಇದರ ನಿವಾರಣೆಗೆ ಇಂಜಿನಿಯರ್‌ಗಳನ್ನು ಸೇರಿಸಿಕೊಂಡು ಸಮಿತಿ ರಚನೆಗೆ ಜೂ.13ರಂದು ನಡೆದ ಮಹಾಯೋಜನೆಯ ಕರಡು ನಕ್ಷೆ ಮತ್ತು ವರದಿಯ ಬಗ್ಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ನಗರ ಪಂಚಾಯಿತಿ ಆಡಳಿತಾಧಿಕಾರಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನ.ಪಂ.ಸದಸ್ಯ ಎಂ.ವೆಂಕಪ್ಪ ಗೌಡ ಮಹಾಯೋಜನೆಯಲ್ಲಿ ಪ್ರತಿ ರಸ್ತೆಗಳು 9 ಮೀಟರ್ ಅಗಲ ಇರಬೇಕು ಎಂದಿದೆ. ಸುಳ್ಯ ನಗರದ ವಾರ್ಡ್‌ಗಳಲ್ಲಿ ಇದು ಸಾಧ್ಯವಿಲ್ಲ. ನಗರದ ಹಲವು ರಸ್ತೆಗಳು 3-4ಮೀಟರ್ ಇದೆ. ಇವುಗಳನ್ನು 9 ಮೀಟರ್‌ಗೆ ಏರಿಸುವುದು ಅಸಾಧ್ಯ. ರಸ್ತೆಯ ಅಗಲವನ್ನು ಕಡಿಮೆ ಮಾಡಬೇಕು. ಅಲ್ಲದೇ ಇದರಲ್ಲಿ ಪರಿಣಿತರಾದ ಇಂಜಿನಿಯರ್‌ಗಳನ್ನು ಸೇರಿಸಿಕೊಂಡು ಸಮಿತಿ ರಚನೆ ಮಾಡಬೇಕು. ಈ ಸಮಿತಿ ಪ್ರತಿ ವಾರ್ಡ್‌ಗಳಿಗೆ ತೆರಳಿ ರಸ್ತೆಗಳನ್ನು ಪರಿಶೀಲನೆ ನಡೆಸಿ ರಸ್ತೆಯನ್ನು ಎಷ್ಟು ಮೀಟರ್ ಅಗಲೀಕರಣ ಮಾಡಬಹುದು ಎಂಬುದರ ಬಗ್ಗೆ ನೀಡಿದ ವರದಿಯನ್ನು ಅನುಷ್ಠಾನಗೊಳಿಸುವ ಕ್ರಮ ಆಗಬೇಕು ಎಂದರು.
ನಗರದ ವಾರ್ಡ್‌ಗಳಲ್ಲಿ ರಸ್ತೆಯ ಅಗಲೀಕರಣವನ್ನು 9 ಮೀಟರ್‌ನಿಂದ ಇಳಿಸಬೇಕು. ಸ್ಥಳಾವಕಾಶ ಇರುವಲ್ಲಿ ರಸ್ತೆ ಅಗಲ ಮಾಡಬಹುದು. ಸ್ಥಳ ಇಲ್ಲದ ಕಡೆ ರಸ್ತೆಯ ಆಗಲವನ್ನು ಕಡಿಮೆ ಮಾಡಬೇಕು ಎಂದು ಪ್ರಸಾದ್ ಇಂಜಿನಿಯರ್ ಹೇಳಿದರು.


ಸುಳ್ಯ ನಗರದ ಮಹಾಯೋಜನೆಯ ಬಗ್ಗೆ ಈ ಹಿಂದೆ ಮಾಡಿದ್ದ ಕರಡು ನಕಾಶೆಯನ್ನು ತಿರಸ್ಕಾರ ಮಾಡಬೇಕು. ಅಲ್ಲದೇ ಬದಲಾವಣೆಗೆ 2 ತಿಂಗಳ ಸಮಯವಾಕಾಶ ನೀಡಬೇಕು ಎಂದು ನ.ಪಂ.ಸದಸ್ಯ ವಿನಯ ಕುಮಾರ್ ಕಂದಡ್ಕ ಹೇಳಿದರು. ಅಲ್ಲದೇ ಕರಡು ನಕಾಶೆಯಲ್ಲಿರುವ ಡ್ರಾಫ್ಟ್ ಮೂಲದಲ್ಲೇ ಸರಿಪಡಿಸಿ ಬಳಿಕ ಇದರ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಸಮಯ ನೀಡಬೇಕು ಎಂದು ವಿನಯ ಕುಮಾರ್ ಕಂದಡ್ಕ ಹೇಳಿದರು.
ಮಹಾಯೋಜನೆಯಲ್ಲಿ ಬರುವ ರಸ್ತೆ ಮತ್ತು ರಾಜ ಕಾಲುವೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇದನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ವಿನಯ ಕುಮಾರ್ ಹೇಳಿದರು.
ಮಹಾಯೋಜನೆಯನ್ನು 20 ವರ್ಷದ ದೃಷಿಯನ್ನು ಇಟ್ಟುಕೊಂಡು ತಯಾರಿಸಲಾಗುತ್ತದೆ. ನಗರದ ಬೆಳವಣಿಗೆಗೆ ಕೈಗಾರಿಕಾ ವಲಯವನ್ನು ಈಗಲೇ ಗುರುತಿಸುವ ಕೆಲಸ ಮಾಡಬೇಕು. ಇದು ಅಗತ್ಯವಾಗಿ ಬೇಕಾಗುವ ವಲಯ ಎಂದು ಜಿಲ್ಲಾ ನಗರ ಯೋಜನಾ ನಿರ್ದೇಶಕ ಪಾರಿತೋಷ್ ನಾಯಕ್ ಹೇಳಿದರು.
ನಗರದ ಬೆಳವಣಿಗೆ ಮತ್ತು ಅಭಿವೃದ್ದಿ ದೃಷ್ಟಿಯಲ್ಲಿ ಮಹಾಯೋಜನೆಯ ಅವಶ್ಯಕತೆ ಇದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಸಮಿತಿಯಲ್ಲಿ ಚರ್ಚೆ ನಡೆಸಿ 2 ತಿಂಗಳ ಒಳಗೆ ಯೋಜನೆಯ ಅನುಷ್ಠಾನಕ್ಕೆ ಕಾರ್ಯಪ್ರವೃತ್ತರಾಗಬೇಕು ಎಂದು ಯೋಜನಾ ನಿರ್ದೇಶಕರು ಹೇಳಿದರು.
ಸೂಡಾ ಇಂಜಿನಿಯರ್ ಉಬೈದುಲ್ಲಾ ಯೋಜನೆಯ ಕುರಿತು ಮಾಹಿತಿ ನೀಡಿದರು. ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ಉಪಸ್ಥಿತರಿದ್ದರು. ಸಭೆಯಲ್ಲಿ ಇಂಜಿನಿಯರ್‌ಗಳಾದ ವಿಜಯ ಕುಮಾರ್, ಪ್ರಸಾದ್, ಗುರುರಾಜ್, ಕೃಷ್ಣ ಭಟ್, ಶ್ಯಾಮ್‌ಪ್ರಸಾದ್, ಕೆವಿಜಿ ಇಂಜಿನಿಯರ್ ಕಾಲೇಜು ಪ್ರಾದ್ಯಾಪಕ ಚಂದ್ರಶೇಖರ್, ನ.ಪಂ. ಸದಸ್ಯರು, ಅಧಿಕಾರಿಗಳು ಇದ್ದರು.