ಇಸ್ರೋ ಚಂದ್ರಯಾನ -3 ಮಿಶನ್ ನಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮದ ಶಂಭಯ್ಯ ಕೊಡಪಾಲ

0

ಬೊಳ್ಳಾಜೆ ಶಾಲೆಯ ಹಳೆ ವಿದ್ಯಾರ್ಥಿ, ಇಸ್ರೋದ ಸೀನಿಯರ್ ಸೈಂಟಿಸ್ಟ್ ಚಂದ್ರಯಾನ-3ರ ಯುನಿಟ್ ಹೆಡ್

ಗ್ರಾಮೀಣ ಭಾಗದ ವಿದ್ಯಾರ್ಥಿ ಉನ್ನತ ಮಟ್ಟದ ವಿಜ್ಞಾನಿ

ಜು.14ರಂದು ಉಡಾವಣೆ ಗೊಂಡು ನಿನ್ನೆ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಯಾನ ಪೂರೈಸಿದ ಈ ತಂಡದಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲದ ಶಂಭಯ್ಯ ಅವರು ಚಂದ್ರಯಾನ – 3ರ ಯುನಿಟ್ ಹೆಡ್ ಆಗಿ ಕಾರ್ಯನಿರ್ವಹಿದ್ದರು ಎಂಬುದು ಸುಳ್ಯದ ಹೆಮ್ಮೆ ಯಾಗಿದೆ.

ಚಂದ್ರನಲ್ಲಿ ಅಧ್ಯಯನ ಕೈಗೊಳ್ಳಲು ಚಂದ್ರಯಾನ-3ನ್ನು ಜು.14ರಂದು ಬೆಂಗಳೂರಿನ ಇಸ್ರೋ ಸಂಸ್ಥೆ ಯಶಸ್ವಿಯಾಗಿ ಉಡಾವಣೆಗೊಳಿಸಿತ್ತು. 3.84 ಲಕ್ಷ ಕಿಲೋಮೋಟರ್ ದೂರ ಪ್ರಯಾಣಿಸಿದ ಚಂದ್ರಯಾನ-3 ಅ.23ರ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಸಾಪ್ಟ್ ಲ್ಯಾಂಡ್‌ ಆಗಿದೆ.‌ ಚಂದ್ರಯಾನ-2 ಲ್ಯಾಂಡಿಂಗ್ ನಲ್ಲಿ ವಿಫಲವಾದ ಕಾರಣ, ಚಂದ್ರಯಾನ -3 ಯಶಸ್ವಿಯಾಗಲಿ ಎಂದು ಇಡೀ ದೇಶವೇ ಹಾರೈಸಿತ್ತು.

ಇದೀಗ ಯಶಶ್ವಿ ಚಂದ್ರಯಾನ-3 ಉಡಾವಣೆ ಮಾಡಿದ ಇಸ್ರೋ ಸಂಸ್ಥೆಯ ತಂಡದಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲದ ಶಂಭಯ್ಯ ಎಂಬವರು ಕರ್ತವ್ಯ ಸಲ್ಲಿಸಿರುವುದು ಹೆಮ್ಮೆಯ ವಿಷಯವಾಗಿದೆ.

ಶಂಭಯ್ಯರವರು ಇಸ್ರೋದಲ್ಲಿ ಸೀನಿಯರ್ ಸೈಂಟಿಸ್ಟ್ ಆಗಿ ಕರ್ತವ್ಯ ಸಲ್ಲಿಸುತ್ತಿದ್ದು, ಚಂದ್ರಯಾನ -3ರಲ್ಲಿ ಯುನಿಟ್ ಹೆಡ್ ಆಗಿ ಕರ್ತವ್ಯ ಸಲ್ಲಿಸಿದ್ದಾರೆ. ಅಲ್ಲದೇ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ನಲ್ಲಿ ಶಂಭಯ್ಯ ಕೊಡಪಾಲ ನೇತೃತ್ವದ ತಂಡ ಪ್ರಧಾನ ಪಾತ್ರ ವಹಿಸಿದೆ ಎಂದು ತಿಳಿದು ಬಂದಿದೆ. ಚಂದ್ರಯಾನ-2ರ ಉಡಾವಣೆಯಲ್ಲಿಯೂ ಶಂಭಯ್ಯರವರು
ಕರ್ತವ್ಯ ಸಲ್ಲಿಸಿದ್ದರು.

ಶಂಭಯ್ಯರವರು ಪ್ರಾಥಮಿಕ ಶಿಕ್ಷಣವನ್ನು ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೊಳ್ಳಾಜೆಯಲ್ಲಿ, ಪ್ರೌಢ ಶಿಕ್ಷಣ ಮತ್ತು ಕಾಲೇಜು‌ ಶಿಕ್ಷಣವನ್ನು ಶ್ರೀ ಸತ್ಯಸಾಯಿ ಲೋಕಸೇವಾ ಜ್ಯೂನಿಯರ್ ಕಾಲೇಜು ಅಳಿಕೆ ಬಂಟ್ವಾಳ ತಾಲೂಕಿನಲ್ಲಿ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಶ್ರೀ ಜಯಚಾಮೇಂದ್ರ ತಾಂತ್ರಿಕ ಮಹಾವಿದ್ಯಾಲಯ ಮೈಸೂರು ಇಲ್ಲಿ ಪೂರೈಸಿ ಪ್ರತಿಷ್ಠಿತ ಇಸ್ರೋ ಸಂಸ್ಥೆಯಲ್ಲಿ ಉದ್ಯೋಗ ಪಡೆದರು. ಬಳಿಕ ಮೆಷಿನ್ ಡಿಸೈನ್(ಉನ್ನತ ವ್ಯಾಸಂಗ)ವನ್ನು ಐಐಟಿ ಮದರಾಸು ಇಲ್ಲಿ ಪೂರೈಸಿದರು.

ಶಂಭಯ್ಯರವರು ನೆಲ್ಲೂರು ಕೆಮ್ರಾಜೆ ಗ್ರಾಮದ ಮಹಾಬಲ ಭಟ್ ಮತ್ತು ಪರಮೇಶ್ವರಿ‌ ಅಮ್ಮನವರ ಪುತ್ರ.

ಬೆಂಗಳೂರಿನಲ್ಲಿ ನರರೋಗ ತಜ್ಞರಾಗಿರುವ ಡಾ.ಸುರೇಶ್ ಕೊಡಪಾಲ, ಸುಳ್ಯದಲ್ಲಿ ವಕೀಲರಾಗಿದ್ದ ರಾಜಶೇಖರ ಕೊಡಪಾಲ, ಅಮೇರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಶ್ರೀರಾಮ ಕೊಡಪಾಲ ಶಂಭಯ್ಯರವರ ಸಹೋದರರು.

ಜಾಲ್ಸೂರು ಸಮೀಪದ ದೇಲಂಪಾಡಿ ಬನಾರಿಯ ಖ್ಯಾತ ಯಕ್ಷಗಾನ ಗುರುಗಳಾದ ವಿಶ್ವ ವಿನೋಧ ಬನಾರಿಯವರ ಪುತ್ರಿ ಗಾಯತ್ರಿಯವರು ಶಂಭಯ್ಯರವರ ಪತ್ನಿ. ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ನವನೀತ್ ಪುತ್ರ.