ಸುಬ್ರಹ್ಮಣ್ಯ:ಬಸ್ ನಿಲ್ದಾಣ ರಸ್ತೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

0

ಸುಬ್ರಹ್ಮಣ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಸಂಪರ್ಕ ರಸ್ತೆ ಸಂಪೂರ್ಣ ದುಸ್ತರಗೊಂಡಿದ್ದು, ಷಷ್ಠಿ ಪೂರ್ವಭಾವಿ ಸಭೆಯಲ್ಲೂ ಪ್ರಸ್ತಾಪ ಆಗಿದ್ದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಬಸ್ ನಿಲ್ದಾಣ ರಸ್ತೆಯನ್ನು ನ.8 ರಂದು ಪರಿಶೀಲನೆ ನಡೆಸಿದರು.

ರಸ್ತೆ ಸಂಪೂರ್ಣ ದುಸ್ತರಗೊಂಡಿದ್ದರೂ ಪ್ರತೀ ವರ್ಷ ತಾತ್ಕಲಿಕ ದುರಸ್ತಿ ಮಾಡುತ್ತಾರೆ ವಿನಃ ಪೂರ್ಣ ಪ್ರಮಾಣದ ಅಭಿವೃದ್ಧಿ ನಡೆಸುತ್ತಿಲ್ಲ ಎಂದು ಈ ವೇಳೆ ಸಾರ್ವಜನಿಕರು ದೂರಿದರು. ಈ ಬಗ್ಗೆ ಜಿಲ್ಲಾಧಿಕಾರಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡಿದ್ದು, ಟೆಂಡರ್ ಪ್ರಕ್ರಿಯೆಯೂ ನಡೆದಿದೆ. ಜಾತ್ರೆಗೆ ಮೊದಲು ರಸ್ತೆ ಕಾಂಕ್ರೀಟೀಕರಣ ಅಸಾಧ್ಯ ಎಂದು ಅಧಿಕಾರಿಗಳು ತಿಳಿಸಿದರು. ಜಾತ್ರೆ ಮೊದಲು ಅಭಿವೃದ್ಧಿ ಅಸಾಧ್ಯವಿರುವುದರಿಂದ ಜಾತ್ರೆಗೆ ಮೊದಲು ರಸ್ತೆಗೆ ಜಲ್ಲಿ ಹಾಕಿ ತಾತ್ಕಲಿಕ ದುರಸ್ತಿ ಮಾಡುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.

ಕಾಂಕ್ರೀಟ್ ರಸ್ತೆ ಬಳಕೆ ಅವಕಾಶ ಅಸಾಧ್ಯ; ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಆದಿ ಸುಬ್ರಹ್ಮಣ್ಯ ಸಂಪರ್ಕದ ಕಾಂಕ್ರೀಟ್ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಅಧಿಕಾರಿಗಳು ಕೇಳಿಕೊಂಡರು. ಇಲ್ಲಿ ಹಾವುಗಳ ಓಡಾಟದ ಹಾದಿಯಾಗಿರುವುದರಿಂದ ಬಸ್‌ಗಳ ಓಡಾಟಕ್ಕೆ ಅವಕಾಶ ನೀಡಲು ಅಸಾಧ್ಯ ಎಂದು ದೇವಳದವರು ತಿಳಿಸಿದರು. ರಸ್ತೆ ದುರಸ್ತಿ ವೇಳೆ ತಾತ್ಕಲಿಕ ಸಮಯದಲ್ಲಿ ಬಸ್ ಓಡಾಟಕ್ಕೆ ಅವಕಾಶ ನೀಡುತ್ತೇವೆ ಎಂದರು.

ಶಾಸಕಿ ಭಾಗೀರಥಿ ಮುರುಳ್ಯ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಇಒ ಡಾ.ನಿಂಗಯ್ಯ, ಅಧಿಕಾರಿಗಳು, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕುಕ್ಕೆ ಸುಬ್ರಹ್ಮಣ್ಯದ ರಥಬೀದಿ ಪ್ರದೇಶ, ಸವಾರಿ ಮಂಟಪ, ಬೈಪಾಸ್ ರಸ್ತೆ, ಆದಿ ಸುಬ್ರಹ್ಮಣ್ಯ ಕಡೆಗಳಿಗೆ ಭೇಟಿ ನೀಡಿ ಚಂಪಾಷಷ್ಠಿ ಜಾತ್ರೆ ಮಹೋತ್ಸವದ ಪೂರ್ವ ಸಿದ್ಧತೆಗಳಿಗೆ ಕೈ ಗೊಳ್ಳಬಹುದಾದ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದು ಸಲಹೆ ಸೂಚನೆಗಳನ್ನು ನೀಡಿದರು.