ಕಳಂಜ ಬಾಳಿಲ ಸಹಕಾರಿ ಸಂಘದ ಬಾಳಿಲ ಶಾಖೆಯಲ್ಲಿ ನವೀಕೃತ ಜಿನಸು ವಿಭಾಗದ ಉದ್ಘಾಟನೆ

0

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಬಾಳಿಲ ಶಾಖೆಯಲ್ಲಿ ನವೀಕೃತಗೊಂಡ ಜಿನಸು ವಿಭಾಗ ಸಹಕಾರಿ ಭಂಡಾರದ ಉದ್ಘಾಟನಾ ಸಮಾರಂಭ ಡಿ. 14ರಂದು ನಡೆಯಿತು.


ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು ವಹಿಸಿದ್ದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಸಹಕಾರಿ ಭಂಡಾರವನ್ನು ಉದ್ಘಾಟಿಸಿದರು. ಸಂಘದ ಮಾಜಿ ಅಧ್ಯಕ್ಷ ವಾರಣಾಶಿ ಗೋಪಾಲಕೃಷ್ಣ ಸ್ಮಾರ್ಟ್ ಕಾರ್ಡ್ ಬಿಡುಗಡೆಗೊಳಿಸಿದರು. ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ. ಪಿ. ರಾಮಚಂದ್ರ ಭಟ್ ದೀಪ ಪ್ರಜ್ವಲನೆಗೊಳಿಸಿದರು. ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪಾವನ ನಾಮಫಲಕ ಅನಾವರಣಗೊಳಿಸಿದರು. ಮಾಜಿ ಜಿ.ಪಂ. ಸದಸ್ಯ ಡಿ. ಚಂದ್ರಶೇಖರ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಸ್ಥೆಯ ಸಿಬ್ಬಂದಿಗಳು ಪ್ರಾರ್ಥಿಸಿದರು. ನಿರ್ದೇಶಕ ಅಜಿತ್ ರಾವ್ ಕಿಲಂಗೋಡಿ ಸ್ವಾಗತಿಸಿ, ಉಪಾಧ್ಯಕ್ಷ ಕರುಣಾಕರ ಶೆಟ್ಟಿ ನಾಲ್ಗುತ್ತು ವಂದಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ತಡಗಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿಬ್ಬಂದಿ ಶ್ರೀಮತಿ ಗೀತಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಶಶಿಕುಮಾರ್ ರೈ ಬಾಳ್ಯೋಟ್ಟುರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಘದ ಕಟ್ಟಡ ನಿರ್ಮಾಣ ಮಾಡಿದ ಗುತ್ತಿಗೆದಾರ ಮೋಹನ್ ದಾಸ್ ರೈ ಬಲ್ಕಾಡಿ, ಇಂಜಿನಿಯರ್ ಜನಾರ್ಧನ ಕುತ್ಯಾಳ ಮತ್ತು ಸಂಘದಲ್ಲಿ ಹೆಚ್ಚು ವ್ಯವಹಾರ ನಡೆಸಿದ ಸದಸ್ಯರನ್ನು ಗೌರವಿಸಲಾಯಿತು. ಸಂಘದಲ್ಲಿ ಉತ್ತಮ ರೀತಿಯಲ್ಲಿ ವ್ಯವಹರಿಸಿದ ನವೋದಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.

ಸಹಕಾರಿ ಸಂಘ ಮನುಷ್ಯನ ಜೀವನದಲ್ಲಿ
ತೊಟ್ಟಿಲಿನಿಂದ ಚಟ್ಟದವರೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಒದಗಿಸುವ ಕೆಲಸದಲ್ಲಿ ಇಂದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಒಂದೇ ಸೂರಿನಡಿ ಎಲ್ಲಾ ಸಾಮಾಗ್ರಿಗಳು ದೊರೆಯುವ ಕಾರ್ಯವನ್ನು ಇವತ್ತು ಸಹಕಾರಿ ಕ್ಷೇತ್ರ ಮಾಡುತ್ತಾ ಬಂದಿದೆ. ಆ ನಿಟ್ಟಿನಲ್ಲಿ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ – ಶಶಿಕುಮಾರ್ ರೈ ಬಾಳ್ಯೋಟ್ಟು

ಸಂಘದ ಎಲ್ಲಾ ಸದಸ್ಯರು ಸಹಕಾರಿ ಸಂಘದಿಂದಲೇ ವ್ಯವಹರಿಸುವುದೆಂದು ಪ್ರತಿಜ್ಞೆ ಮಾಡಿ. ಆ ಮೂಲಕ ಸಂಘದ ಪ್ರಗತಿಗೆ ನಾವೆಲ್ಲಾ ಕೈಜೋಡಿಸುವ. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘ ಬಾಳಿಲಕ್ಕೆ ಬೇರೇಯೇ ಸಂಘವಾಗಿ ವಿಭಜನೆಯಾಗದೆ ಕಳಂಜ, ಬಾಳಿಲ ಮತ್ತು ಮುಪ್ಪೇರ್ಯ ಭಾಗದ ಎಲ್ಲಾ ಸದಸ್ಯರು ಸಹೋದರತರಯಿಂದ ಒಂದೇ ಸಂಘವನ್ನು ಮುನ್ನಡೆಸಿಕೊಂಡು ಹೋಗುವ – ವಾರಣಾಶಿ ಗೋಪಾಲಕೃಷ್ಣ

ಸಂಘದ ಗ್ರಾಹಕರೇ ನಮಗೆ ದೇವರು. ಸಂಘ ಲಾಭಗಳಿಸಿದರೆ ಅದರಲ್ಲಿ ಎಲ್ಲಾ ಸದಸ್ಯರಿಗೆ ಪಾಲಿದೆ‌. ಗ್ರಾಹಕರಿಗೆ ಬೇಕಾಗುವ ಎಲ್ಲಾ ಸಾಮಾಗ್ರಿಗಳು ಒಂದೇ ಸೂರಿನಡಿ ಲಭ್ಯವಾಗುವ ವ್ಯವಸ್ಥೆ ಕಲ್ಪಿಸಿದ್ದೇವೆ. ಎಲ್ಲಾ ಸದಸ್ಯರು ಸಂಘದಿಂದಲೇ ವ್ಯವಹಾರ ನಡೆಸಿ ಸಂಘದ ಅಭಿವೃದ್ಧಿಗೆ ಶ್ರಮಿಸಿ – ಎಂ. ಕೂಸಪ್ಪ ಗೌಡ

ಶುಭಾರಂಭ ಪ್ರಯುಕ್ತ ಗ್ರಾಹಕರಿ ವಿಶೇಷ ಕೊಡುಗೆ

ಸಂಘದ ಜಿನಸು (ಸುಪರ್ ಮಾರ್ಕೆಟ್) ವಿಭಾಗದಲ್ಲಿ ಶುಭಾರಂಭದ ದಿನವಾದ ಡಿ. 14ರಂದು ಅಕ್ಕಿ, ಹಿಂಡಿ ಹೊರತು ಪಡಿಸಿ ಉಳಿದಂತೆ ಸಾಮಾಗ್ರಿಗಳನ್ನು ರೂ. 500/-ಕ್ಕಿಂತ ಮೇಲ್ಪಟ್ಟು ಖರೀದಿಸಿದ ಗ್ರಾಹಕರಿಗೆ ವಿಶೇಷ ಉಚಿತ ಕೂಪನ್ ನೀಡಲಾಗುವುದು. ಈ ಕೂಪನ್ ಮೂಲಕ ಒಂದು ತಿಂಗಳು ಶೇ. 5 ರಿಯಾಯಿತಿ ದರದಲ್ಲಿ ಸಾಮಾಗ್ರಿಗಳನ್ನು ಖರೀದಿಸಬಹುದು. ಒಂದು ತಿಂಗಳ ಬಳಿಕ ಮತ್ತೆ ರೂ. 500. ಕ್ಕಿಂತ ಮೇಲ್ಪಟ್ಟು ಸಾಮಾಗ್ರಿಗಳನ್ನು ಖರೀದಿಸಿದರೆ ಮತ್ತೆ ಒಂದು ತಿಂಗಳಿಗೆ ಕೂಪನ್ ನವೀಕರಣಗೊಳ್ಳಲಿದೆ. ಎಂದು ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.