ಸಾಲಬಾಧೆಯಿಂದ ಆತ್ಮಹತ್ಯೆಗೈದ ಕೃಷಿಕರ ಕುಟುಂಬಕ್ಕೆ ಸರಕಾರದಿಂದ ಪರಿಹಾರಧನ ಮಂಜೂರು : ಶಾಸಕರಿಂದ ಹಸ್ತಾಂತರ

0

ಅಡಿಕೆ ಎಲೆ ಹಳದಿ ರೋಗ ಹಾಗೂ ಎಲೆ ಚುಕ್ಕೆ ರೋಗದಿಂದ ಕೃಷಿ ನಾಶವಾಗಿ, ಬ್ಯಾಂಕ್‌ನಿಂದ ಪಡೆದ ಸಾಲ ಪಾವತಿ ಮಾಡಲು ಸಾಧ್ಯವಾಗದೇ ನೊಂದ ಕೃಷಿಕರಿಬ್ಬರು ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದು, ಆ ಕುಟುಂಬಕ್ಕೆ ಸರಕಾರದಿಂದ ಪರಿಹಾರಧನ ಮಂಜೂರುಗೊಂಡಿದ್ದು, ಅದನ್ನು ಫೆ.೮ರಂದು ಹಸ್ತಾಂತರ ಮಾಡಲಾಯಿತು.
ಏನೆಕಲ್ಲು ಗ್ರಾಮದ ಮೋಹನ್ ಕುಮಾರ್‌ರವರು ಕೆಲ ತಿಂಗಳ ಹಿಂದೆ ಹಾಗೂ ಮರ್ಕಂಜ ಗ್ರಾಮದ ನಾರಾಯಣ ನಾಯಕ್ ರವರು ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು. ಈ ಎರಡೂ ಕುಟುಂಬಕ್ಕೆ ಸರಕಾರದಿಂದ ರೂ. ೫ಲಕ್ಷದಂತೆ ಪರಿಹಾರಧನ ಮಂಜೂರಾಗಿದೆ.
ಫೆ.೮ರಂದು ಸುಳ್ಯ ಕೃಷಿ ಇಲಾಖೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯರವರು ಮೃತಪಟ್ಟ ಕೃಷಿಕರ ಮನೆಯವರಿಗೆ ಮಂಜೂರು ಪತ್ರ ವಿತರಿಸಿದರು. ಬಳಿಕ ಮಾತನಾಡಿದ ಶಾಸಕರು, ರೈತರು ಸಂಕಷ್ಟದಲ್ಲಿರುವ ಸಂದರ್ಭ ಅವರಿಗೆ ಧೈರ್ಯ ತುಂಬುಕ ಕೆಲಸ ಎಲ್ಲರೂ ಮಾಡಬೇಕು. ಕೊಡಗು ಸಂಪಾಜೆ, ಸಂಪಾಜೆ ಭಾಗದಲ್ಲಿ ಅಡಿಕೆ ಎಲೆ ಹಳದಿ ರೋಗ ವ್ಯಾಪಕವಾಗಿದ್ದು, ಉಳಿದ ಗ್ರಾಮಕ್ಕೂ ವ್ಯಾಪಿಸಿದೆ. ಇದರ ಪರಿಹಾರಕ್ಕೆ ಈಗಾಗಲೇ ನಾನು ಸರಕಾರದ ಗಮನ ಸೆಳೆದಿದ್ದು, ಮುಂದಿನ ಅಧಿವೇಶನದಲ್ಲೂ ಗಮನ ಸೆಳೆಯುವೆ ಎಂದು ಹೇಳಿದರು.
ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಕೃಷಿ ಇಲಾಖೆಯ ಸಹಾಯ ನಿರ್ದೇಶಕ ಗುರುಪ್ರಸಾದ್ ಪ್ರಸ್ತಾವಿಕ ಮಾತನಾಡಿದರು. ತೋಟಗಾರಿಕಾ ಇಲಾಖಾ ಅಧಿಕಾರಿ ಅರಬಣ್ಣ ಪೂಜೇರಿ, ಸಂಜೀವಿನಿ ಒಕ್ಕೂಟದ ಅಧಿಕಾರಿ ಶ್ರೀಮತಿ ಶ್ವೇತಾ ವೇದಿಕೆಯಲ್ಲಿದ್ದರು.