ಸಂಪಾಜೆ: ನದಿಗೆ ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಗ್ರಾ.ಪಂ.ಗೆ ಮಾಹಿತಿ ಹಿನ್ನೆಲೆ

0

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನದಿಗೆ ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ಸಾರ್ವಜನಿಕರು ಗ್ರಾ.ಪಂ.ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಗ್ರಾ.ಪಂ. ವತಿಯಿಂದ ತ್ಯಾಜ್ಯ ಎಸೆದವರಿಂದಲೇ ತೆರವುಗೊಳಿಸಿ, ಗ್ರಾ.ಪಂ. ವತಿಯಿಂದ ದಂಡ ವಿಧಿಸಿದ ಘಟನೆ ಮಾ.25ರಂದು ವರದಿಯಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಸಂಪಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರವಾಸಿಗರು, ವಾಹನ ಪ್ರಯಾಣಿಕರು ಕಸ ಎಸೆಯುತ್ತಿದ್ದು, ಸ್ಥಳೀಯವಾಗಿ ರಸ್ತೆ ಬದಿ ವ್ಯಾಪಾರ ನಡೆಸುವ ವ್ಯಾಪಾರಿಗಳು ರಸ್ತೆ ಬದಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿರುವುದು ಸಾಮಾನ್ಯವಾಗಿದೆ.

ಮಾ.25ರಂದು ಕಲ್ಲುಗುಂಡಿ ಸಹಕಾರಿ ಸಂಘದ ಬಳಿಯ ಮುಖ್ಯರಸ್ತೆ ಬಳಿ ನದಿಗೆ ತ್ಯಾಜ್ಯ ಹಾಗೂ ಹಣ್ಣಿಗೆ ಹಾಕಿದ ಮದ್ದು ಗಳನ್ನು ಎಸೆಯುವಾಗ ಸ್ಥಳೀಯ ಸಾರ್ವಜನಿಕರು ಗ್ರಾ.ಪಂ.ಗೆ ಮಾಹಿತಿ ನೀಡಿದ ಮೇರೆಗೆ ತಕ್ಷಣ ಕಾರ್ಯಪ್ರವೃತರಾದ ಸಂಪಾಜೆ ಗ್ರಾಮ ಪಂಚಾಯತಿಯವರು ಸ್ಥಳಕ್ಕೆ ಭೇಟಿ ನೀಡಿ, ತ್ಯಾಜ್ಯ ಎಸೆದ ವಾಹನದ ಮಾಲಕರಿಂದಲೇ ತೆರವುಗೊಳಿಸಿ ಗ್ರಾಮ ಪಂಚಾಯತ್ ವತಿಯಿಂದ ದಂಡ ವಿಧಿಸಲಾಯಿತು.