ಮಗಳಿಂದ ತಂದೆಯ ಕೃಷಿ ತೋಟಕ್ಕೆ ಹಾನಿ : ನಿವೃತ್ತ ಶಿಕ್ಷಕರೊಬ್ಬರಿಂದ ಮಗಳ ಮೇಲೆ ಪೋಲೀಸ್ ದೂರು

0

ಆಸ್ತಿ ವಿಷಯಕ್ಕೆ ಸಂಬಂಧಿಸಿ ತಂದೆ ಮತ್ತು ಮಗಳ ನಡುವೆ ಜಗಳ ಉಂಟಾಗಿ ಸ್ವತಃ ಮಗಳೇ ತಂದೆಯ ಕೃಷಿ ತೋಟದ ಬಾಳೆ ಹಾಗೂ ಅಡಿಕೆ ಗಿಡಗಳನ್ನು ಕತ್ತರಿಸಿ, ಕೃಷಿ ಯಂತ್ರಗಳನ್ನು ಹಾನಿಗೊಳಿಸಿದ್ದಾರೆಂದು ನಿವೃತ್ತ ಶಿಕ್ಷಕರೊಬ್ಬರು ಮಗಳ ವಿರುದ್ಧ ಸುಳ್ಯ ಪೋಲೀಸ್ ಠಾಣೆಗೆ ದೂರು ನೀಡಿರುವುದಾಗಿ ಗೊತ್ತಾಗಿದೆ.

ಸಂಪಾಜೆಯ ಗಡಿಕಲ್ಲಿನ ನಿವಾಸಿ ಇಬ್ರಾಹಿಂ ಮಾಸ್ತರ್ ಹಾಗೂ ಅವರ ಮಗಳು ಆಯಿಶತುಲ್ ಪೌಮ್ಯ ಎಂಬವರು ಸಂಪಾಜೆಯ ಗಡಿಕಲ್ಲಿನಲ್ಲಿ ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದು , ಅವರ ನಡುವೆ ಆಸ್ತಿ ವಿವಾದ ಇದ್ದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಮೊದಲು ಮಗಳು ಇಬ್ರಾಹಿಂ ರವರ ಕೃಷಿ ತೋಟಕ್ಕೆ ಬಂದು ತೋಟದಲ್ಲಿ ಬಳಸುವ ಸ್ಪ್ರಿಂಕ್ಲರ್ ಯಂತ್ರಗಳನ್ನು ಹಾಳು ಮಾಡಿದ್ದಲ್ಲದೆ ಬಾಳೆ ಮತ್ತು ಅಡಿಕೆ ಗಿಡಗಳನ್ನು ಕತ್ತರಿಸಿ ಕೃಷಿ ತೋಟವನ್ನು ಕೂಡ ಹಾನಿ ಮಾಡಿದ್ದು ಕೊಟ್ಟಿಗೆಯಲ್ಲಿ ಶೇಖರಿಸಿಟ್ಟಿದ್ದ ಕಟ್ಟಿಗೆ ಮತ್ತು ತೆಂಗಿನಕಾಯಿ ಚೆಪ್ಪುಗಳಿಗೆ ಬೆಂಕಿಯನ್ನು ಕೂಡ ಕೊಟ್ಟಿದ್ದಾರೆಂದು ತಂದೆ ಇಬ್ರಾಹಿಂ ಮಾಸ್ತರ್ ಪೋಲೀಸ್ ದೂರು ನೀಡಿದ್ದಾರೆ.

ಇದರ ಬಗ್ಗೆ ಘಟನೆ ನಡೆದ ದಿನದಂದು ಇಬ್ರಾಹಿಂ ರವರು ಮಗಳ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಘಟನೆಗೆ ಸಂಬಂಧಿಸಿ ಮೇ 8 ರಂದು ಆಯಿಷತುಲ್ ಪೌಮ್ಯ ರವರು ಕೂಡ ಸುಳ್ಯ ಪೊಲೀಸ್ ಠಾಣೆಯಲ್ಲಿ ತಂದೆ ಇಬ್ರಾಹಿಂ ಹಾಗೂ ತಾಯಿ ಆಮಿನಾರವರ ಮೇಲೆ ದೂರು ನೀಡಿದ್ದು, ದೂರಿನಲ್ಲಿ ‘ ಸಂಪಾಜೆ ಗ್ರಾಮದ ಗಡಿಕಲ್ಲು ಎಂಬಲ್ಲಿ ತನ್ನ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದು ನನ್ನ ಮನೆಯ ಪಕ್ಕದ ಮನೆಯಲ್ಲಿರುವ ತಂದೆ ಇಬ್ರಾಹಿಂ ಮತ್ತು ತಾಯಿ ಅಮೀನಾ ಎಸ್.ಎಂ. ಮೇ 7ರಂದು ಸಂಜೆ 7 ಗಂಟೆಗೆ ಕಾನೂನು ಬಾಹಿರವಾಗಿ ನನ್ನ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ನನ್ನನ್ನು ಅವಾಚ್ಯ ಶಬ್ಧಗಳಿಂದ ಬೈದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಒಡ್ಡಿದ್ದಾರೆ.ಅಲ್ಲದೆ ಮನೆಗೆ ಬರುವ ಗೇಟಿಗೆ ಬೀಗ ಹಾಕಿ ಹೋಗಿದ್ದಾರೆ.


ಇದೆಲ್ಲಾ ನನ್ನ ಹೆಸರಿನಲ್ಲಿರುವ ಆಸ್ತಿಯನ್ನು ಲಪಟಾಯಿಸುವ ಕಾರಣದಿಂದ ಒಂದಲ್ಲ ಒಂದು ರೀತಿಯಲ್ಲಿ ನನಗೆ ತೊಂದರೆ ನೀಡುತ್ತಿದ್ದಾರೆ. ಹಾಗಾಗಿ ತಂದೆ-ತಾಯಿ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕೆಂದು ಉಲ್ಲೇಖಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿ ಸುಳ್ಯ ಪೊಲೀಸರು ಇತ್ತಂಡಗಳಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದುಬಂದಿದೆ.