ಶ್ರೀ ದೈವಗಳ ನೇಮೋತ್ಸವ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಕಾರಣಿಕ ಪುರುಷರಾಯ ಬೆಟ್ಟದಲ್ಲಿ ನೂತನವಾಗಿ ನಿರ್ಮಿತವಾದ ಹೊಸಳಿಗಮ್ಮ, ಪುರುಷರಾಯ ಮತ್ತು ಇತರ ದೈವಗಳ ಗುಡಿಗಳಲ್ಲಿ ದೈವಗಳ ಪ್ರತಿಷ್ಠಾ ಕಾರ್ಯಕ್ರಮ ಹಾಗೂ ನೇಮೋತ್ಸವ ಮೇ.12 ರಂದು ನೆರವೇರಿತು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ೯.೩೦ರ ಮಿಥುನ ಲಗ್ನ ಸುಮೂಹುರ್ತದಲ್ಲಿ ಶ್ರೀ ದೈವಗಳ ಪ್ರತಿಷ್ಠೆ ನೆರವೇರಿಸಿದರು.
ಪ್ರತಿಷ್ಠಾ ಪ್ರಧಾನ ಹೋಮವನ್ನು ನೆರವೇರಿಸಿ, ಬಳಿಕ ಕ್ಷೇತ್ರ ರಕ್ಷಕಿ ಹೊಸಳಿಗಮ್ಮ ಗುಡಿಯಲ್ಲಿ ಕಲಶ ಪ್ರತಿಷ್ಠೆ ನಡೆದು ಕಲಶಾಭಿಷೇಕ ನೆರವೇರಿತು.ಬಳಿಕ ಶ್ರೀ ದೈವದ ಪ್ರತಿಷ್ಠೆ ನೆರವೇರಿತು.ಬಳಿಕ ಪೂಜೆ ಸಮರ್ಪಿಸಲಾಯಿತು.ನಂತರ ಪುರುಷರಾಯ ಗುಡಿಗೆ ಕಲಶ ಪ್ರತಿಷ್ಠೆ, ಕಲಶಾಭಿಷೇಕ ಮತ್ತು ಶ್ರೀ ದೈವದ ಪ್ರತಿಷ್ಠೆ ನಡೆಯಿತು. ನಂತರ ಕಾಜುಕುಜುಂಬ, ಕಂಚಿರಾಯ ಮತ್ತು ಪಂಜುರ್ಲಿ ದೈವದ ಗುಡಿಗಳಲ್ಲಿ ಕಲಶ ಪ್ರತಿಷ್ಠೆ ಕಲಶಾಭಿಷೇಕ ಮತ್ತು ಶ್ರೀ ದೈವಗಳ ಪ್ರತಿಷ್ಠೆ ನಡೆದು ಪೂಜೆ ನಡೆಯಿತು.
ದೈವಗಳ ಪ್ರತಿಷ್ಠೆಯ ಬಳಿಕ ಪುರುಷರಾಯ ಬೆಟ್ಟದಲ್ಲಿ ಚಂಡಿಕಾ ಹೋಮ ನಡೆಯಿತು.
ಶ್ರೀ ದೈವಗಳ ನೇಮೋತ್ಸವ
ಅದೇ ದಿನ ರಾತ್ರಿ ಕಾಜುಕುಜುಂಬ, ಕಂಚಿರಾಯ ಮತ್ತು ಪಂಜುರ್ಲಿ ದೈವಗಳ ನೇಮ ನಡಾವಳಿಗಳು ಮತ್ತು ನರ್ತನ ಸೇವೆ ನಡೆಯಿತು.ಮರುದಿನ ಬೆಳಗ್ಗೆ ಹೊಸಳಿಗಮ್ಮ ಮತ್ತು ಪುರುಷರಾಯ ದೈವಗಳ ನೇಮ ನಡಾವಳಿಗಳು ಹಾಗೂ ನರ್ತನ ಸೇವೆ ನಡೆಯಿತು.ಅಂತಿಮವಾಗಿ ಪ್ರಸಾದ ವಿತರಣೆ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಲೋಕೇಶ್ ಮುಂಡೋಕಜೆ, ಮನೋಹರ ರೈ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಮನೋಜ್ ಸುಬ್ರಹ್ಮಣ್ಯ, ಅರ್ಚಕ ನಾರಾಯಣ ಭಟ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಶ್ರೀ ದೇವಳದ ಷಣ್ಮುಖ ಉಪರ್ಣ, ಮಹಾಬಲೇಶ್ವರ ದೋಳ, ನಂದೀಶ್, ವೆಂಕಟ್ರಮಣ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.