ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕುಡೆಕಲ್ಲು ಪರಿಶಿಷ್ಟ ಜಾತಿ ಕಾಲನಿಗೆ ಸಂಬಂಧಿಸಿದ ಕಾರಣಿಕ ಸಾನಿಧ್ಯ ಶ್ರೀ ಮಹಮ್ಮಾಯಿ ದೇವಿಯ ದೇವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವದ ಪೂರ್ವ ಸಿದ್ದತೆಯು ಭರದಿಂದ ನಡೆಯುತ್ತಿದೆ. ಮೇ.28 ಮತ್ತು 29 ರಂದು ಕುಂಟಾರು ಕ್ಷೇತ್ರದ ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ಪ್ರತಿಷ್ಠಾ ಕಾರ್ಯ ಹಾಗೂ ಬ್ರಹ್ಮಕಲಶವು ನಡೆಯಲಿರುವುದು. ಬಹಳ ವರುಷಗಳಿಂದ ಅಜೀರ್ಣಾವಸ್ಥೆಯಲ್ಲಿದ್ದ ಸಾನಿಧ್ಯವನ್ನು ಸ್ಥಳೀಯ ಗ್ರಾಮದವರು ಒಟ್ಟು ಸೇರಿ ಸಭೆ ನಡೆಸಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಿಕೊಂಡು ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಂಡಿರುತ್ತಾರೆ.
ಇದೀಗ ಜೀರ್ಣೋದ್ಧಾರ ಕಾರ್ಯ ನಡೆದು ಬ್ರಹ್ಮಕಲಶೋತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದು ಅತ್ಯಂತ ಸುಂದರವಾಗಿ ದೇವಸ್ಥಾನದ ನಿರ್ಮಾಣವಾಗಿದೆ. ಸುಳ್ಯದಿಂದ ಆಲೆಟ್ಟಿಗೆ ಸಂಚರಿಸುವ ದಾರಿ ಮಧ್ಯೆ ನಾರ್ಕೋಡು ಸದಾಶಿವ ಕ್ಷೇತ್ರದ ದ್ವಾರದಿಂದ ಒಂದು ಪರ್ಲಾಂಗಿನಷ್ಟು ಮುಂದೆ ಸಾಗಿದರೆ ಮುಖ್ಯ ರಸ್ತೆಯ ಬದಿಯಲ್ಲಿ ಶ್ರೀ ದೇವಿಯ ಸಾನಿಧ್ಯ ಕಂಗೊಳಿಸಲು ಅಣಿಯಾಗಿದೆ.