ಗೆಲುವು ನಮ್ಮನ್ನು ಜಗತ್ತಿಗೆ ಪರಿಚಯಿಸುವುದು, ಸೋಲು ನಮಗೆ ಜಗತ್ತನ್ನೇ ಪರಿಚಯಿಸಬಲ್ಲುದು : ಕೆ.ಆರ್.ಗಂಗಾಧರ
ಆಲೆಟ್ಟಿ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪೂರ್ವ ಪ್ರಾಥಮಿಕ ಎಲ್.ಕೆ.ಜಿ, ಯು.ಕೆ.ಜಿ ಇಂಗ್ಲೀಷ್ ಮಿಡಿಯಂ ತರಗತಿಯು ಜೂ.1 ರಂದು ಉದ್ಘಾಟನೆಗೊಂಡಿತು.
ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ರವರು ರಿಬ್ಬನ್ ಕತ್ತರಿಸಿ ತರಗತಿಯನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವಿಶ್ರಾಂತ ಪ್ರಾಂಶುಪಾಲರಾದ ಕೆ.ಆರ್.ಗಂಗಾಧರ ರವರು
ಮಾತನಾಡಿ
“ಕನ್ನಡ ಭಾಷೆಯು ಮಾತೃಭಾಷೆಯಾಗಿ ನಮ್ಮ ದೈನಂದಿನ ಬದುಕಿನಲ್ಲಿ ಅಗತ್ಯವಾಗಿ ಬಳಕೆಯಲ್ಲಿರಬೇಕು. ಶಿಕ್ಷಣದ ವ್ಯವಸ್ಥೆಯಲ್ಲಿ ಉನ್ನತ ವ್ಯಾಸಂಗ ಅಥವಾ ಉದ್ಯೋಗಕ್ಕೆ ಬೇರೆಡೆಗೆ ತೆರಳಿದಾಗ ಅಲ್ಲಿ ಇಂಗ್ಲೀಷ್ ಅವಶ್ಯವಾಗಿ ತಿಳಿದಿರಬೇಕು. ಇಂಗ್ಲೀಷಿನ ಮೇಲೆ ವ್ಯಾಮೋಹ ಇರಬೇಕೆಂದಿಲ್ಲ. ಆದರೆ ಅಗತ್ಯಕ್ಕೆ ಅನುಗುಣವಾಗಿ ಕಲಿಯಬೇಕಾದ ಅನಿವಾರ್ಯತೆ ಇಂದಿನ ಕಾಲಮಾನದಲ್ಲಿ ಇರುವುದು.
ಪೋಷಕರು ಮಕ್ಕಳಿಗೆ ಸರಿಯಾದ ಜ್ಞಾನವನ್ನು ತುಂಬಬೇಕು. ಮಕ್ಕಳ ಚಲನವಲನದ ಮೇಲೆ ದಿನ ನಿತ್ಯ ಗಮನಿಸಬೇಕು. ಮಕ್ಕಳಿಗೆ ಜವಾಬ್ದಾರಿಯನ್ನು ವಹಿಸಿಕೊಡಬೇಕು.
ಮಕ್ಕಳಿಗೆ ಸೋಲಿನ ಬಗ್ಗೆ ಅನುಭವದ ಬಗ್ಗೆ ತಿಳಿಯಪಡಿಸುವಂತಾಗಬೇಕು. ಸೋಲನ್ನು ಎದುರಿಸಿದಾಗ ಬದುಕಿನಲ್ಲಿ ಕೆಟ್ಟ ನಿರ್ಧಾರಕ್ಕೆ ಬರುವುದಿಲ್ಲ. ಗೆಲುವು ನಮ್ಮನ್ನು ಜಗತ್ತಿಗೆ ಪರಿಚಯಿಸಬಲ್ಲುದು. ಸೋಲು ನಮಗೆ ಜಗತ್ತನ್ನು ಪರಿಚಯಿಸುತ್ತದೆ ಎಂದು ಅವರು ಕಿವಿ ಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಎಲ್.ಕೆ.ಜಿ,ಯು.ಕೆ.ಜಿ
ನಿರ್ವಹಣಾ ಸಮಿತಿ ಅಧ್ಯಕ್ಷ ಚಂದ್ರಕಾಂತ ನಾರ್ಕೋಡು ರವರು ಮಾತನಾಡಿ” ಆಲೆಟ್ಟಿ ಗ್ರಾಮದಲ್ಲಿ ಸರಕಾರಿ ಶಾಲೆಗಳ ಪೈಕಿ ಎರಡು ಶಾಲೆ ಮುಚ್ಚಲ್ಪಟ್ಟಿದೆ. ಸಾವಿರಾರು ಮಂದಿ ವಿದ್ಯಾರ್ಜನೆಗೈದ ಈ ಶಾಲೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಹಾಗೂ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನೂಕೂಲಕರವಾಗಲೆಂದು ಎಲ್. ಕೆ.ಜಿ, ಯು.ಕೆ .ಜಿ ತರಗತಿ ಆರಂಭಿಸುವ ಕಾರ್ಯಕ್ಕೆ ಮುಂದಡಿ ಇಟ್ಟಿದ್ದೇವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸತ್ಯಪ್ರಸಾದ್ ಗಬ್ಬಲ್ಕಜೆ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ರೋಟರಿ ವಿದ್ಯಾ ಸಂಸ್ಥೆಯ ಸಂಚಾಲಕ ರೊ.ಗಿರಿಜಾಶಂಕರ ತುದಿಯಡ್ಕ,ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಹುಕ್ರಪ್ಪ ಪೂಜಾರಿ ಕುದ್ಕುಳಿ, ಬಾರ್ಪಣೆ ವಿಕ್ರಮ ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಕೋಲ್ಚಾರು, ನಿವೃತ್ತ ಮುಖ್ಯ ಶಿಕ್ಷಕ ವೆಂಕಪ್ಪ ಮಾಸ್ತರ್ ಕುಂಚಡ್ಕ, ರೋಟರಿ ಸಿಟಿ ಕ್ಲಬ್ ನ ನಿಯೋಜಿತ ಅಧ್ಯಕ್ಷ ರೊ.ಗಿರೀಶ್ ನಾರ್ಕೋಡು, ಎಲ್.ಕೆ.ಜಿ ಯು.ಕೆ.ಜಿ.ನಿರ್ವಹಣಾ ಸಮಿತಿ ಕೋಶಾಧಿಕಾರಿ ತೀರ್ಥಕುಮಾರ್ ಕುಂಚಡ್ಕ, ಶಾಲಾ ಮುಖ್ಯ ಶಿಕ್ಷಕಿ ಪದ್ಮ ಡಿ ಯವರು ಉಪಸ್ಥಿತರಿದ್ದು ಅನಿಸಿಕೆ ವ್ಯಕ್ತ ಪಡಿಸಿದರು.
ಪ್ರಾರಂಭದಲ್ಲಿ ಅತಿಥಿಗಳು ಎಲ್.ಕೆ.ಜಿ,ಯು.ಕೆ.ಜಿ ಯ ಮಕ್ಕಳಿಗೆ ಪುಷ್ಪ ನೀಡಿ ಸ್ವಾಗತಿಸಿದರು.
ಎಲ್ಲಾ ಮಕ್ಕಳಿಗೆ ಪಠ್ಯ ಪುಸ್ತಕವನ್ನು ವಿತರಿಸಲಾಯಿತು.
ಶೈಕ್ಷಣಿಕ ಒಂದು ವರ್ಷದ ಶಿಕ್ಷಕರೊಬ್ಬರ ವೇತನದ ಬಾಬ್ತು ತೀರ್ಥಕುಮಾರ್ ಕುಂಚಡ್ಕ ಧನ ಸಹಾಯ ನೀಡಿದರು. ಬಾರ್ಪಣೆ ವಿಕ್ರಮ ಯುವಕ ಮಂಡಲದ ವತಿಯಿಂದ ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ಕೊಡುಗೆಯಾಗಿ ವಿತರಿಸಿದರು.
ಶಿಕ್ಷಕಿ ಸುನಂದ, ಗಿರೀಶ್ ನಾರ್ಕೋಡು ಸಹಾಯಧನ ನೀಡಿದರು. ರೋಟರಿ ಸಂಸ್ಥೆಯ ವತಿಯಿಂದ ಧನಸಹಾಯ ನೀಡುವುದಾಗಿ ರೋ.ಗಿರಿಜಾ ಶಂಕರ್ ರವರು ಘೋಷಿಸಿದರು. ಶಾಲೆಗೆ ಸುಸಜ್ಜಿತ ಶೌಚಾಲಯವನ್ನು ರೋಟರಿ ಸಿಟಿ ವತಿಯಿಂದ ನಿರ್ಮಿಸಿಕೊಡುವುದಾಗಿ ರೊ.ಗಿರೀಶ್ ನಾರ್ಕೋಡು ತಿಳಿಸಿದರು.
ಲಯನ್ ರಂಗನಾಥ್ ರವರ ವತಿಯಿಂದ ಮಕ್ಕಳಿಗೆ ಸಿಹಿ ತಿಂಡಿ ಹಂಚಲಾಯಿತು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ನಿರ್ವಹಣಾ ಸಮಿತಿ ಉಪಾಧ್ಯಕ್ಷ ರಾಮಚಂದ್ರ ಆಲೆಟ್ಟಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ನಿರ್ವಹಣಾ ಸಮಿತಿ ಕಾರ್ಯದರ್ಶಿ ಶಿಕ್ಷಕ ಸುನಿಲ್ ಕುಮಾರ್ ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಶಾಲೆಯನ್ನು ಬಲೂನ್ ಮತ್ತು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ನಿರ್ವಹಣಾ ಸಮಿತಿಯ ಸಲಹೆಗಾರರು ಮತ್ತು ಸದಸ್ಯರು, ಪಂಚಾಯತ್ ಸದಸ್ಯರು, ಎಸ್.ಡಿ.ಎಂ.ಸಿ.ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಪೋಷಕರು, ಅದ್ಯಾಪಕ ವೃಂದದವರು, ವಿದ್ಯಾರ್ಥಿ ಗಳು, ಶಾಲಾ ಸಿಬ್ಬಂದಿಗಳು,
ಸ್ಥಳೀಯ ವಿದ್ಯಾಭಿಮಾನಿಗಳು
ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.