☄️ ರಾಜ್ಯ ಸರಕಾರದ ಗ್ಯಾರಂಟಿ ” ಶಕ್ತಿ ” ಯೋಜನೆ ಇಂದಿನಿಂದ ಜಾರಿಗೆ

0

ಇಂದಿನಿಂದ ಮಹಿಳೆಯರು ಬಸ್ ಪ್ರಯಾಣಕ್ಕೆ ಹಣ ನೀಡಬೇಕಾಗಿಲ್ಲ

ಯೋಜನೆ ಹೇಗೆ ಅನುಷ್ಠಾನಗೊಳ್ಳಲಿದೆ? ಇಲ್ಲಿದೆ ಮಾಹಿತಿ

ರಾಜ್ಯ ಸರಕಾರ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಇಂದಿನಿಂದ ಜಾರಿಗೊಳ್ಳಲಿದೆ.‌

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ವಿದ್ಯಾರ್ಥಿನಿಯರೂ ಸೇರಿದಂತೆ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೆ ಇಂದು ಚಾಲನೆ ನೀಡಲಾಗುವುದು.

ಈ ಯೋಜನೆಯ ಅಧಿಸೂಚನೆ ಪ್ರಕಾರ, ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬೇಕಾದರೆ ʻಶಕ್ತಿ ಸ್ಮಾರ್ಟ್‌ ಕಾರ್ಡ್‌ʼ ಹೊಂದುವುದು ಕಡ್ಡಾಯ.

ಕರ್ನಾಟಕ ರಾಜ್ಯದ ನಗರ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ವಿದ್ಯಾರ್ಥಿನಿಯರು ಸೇರಿ ಎಲ್ಲ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಉಚಿತವಾಗಿ ಪ್ರಯಾಣಿಸಬಹುದು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ಸಂಸ್ಥೆಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಆದರೆ, ಕೆಲವು ಷರತ್ತುಗಳನ್ನು ಅನ್ವಯಿಸಲಾಗಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ನಾಲ್ಕು ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸ೦ಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸ೦ಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಸಾರಿಗೆಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು.

ಶಕ್ತಿ ಸ್ಮಾರ್ಟ್‌ಕಾರ್ಡ್‌ ಅನ್ನು ವಿತರಿಸುವವರೆಗೆ ಭಾರತ ಸರ್ಕಾರ/ ಕರ್ನಾಟಕ ಸರ್ಕಾರದ ಇಲಾಖೆ / ಸರ್ಕಾರಿ ಸ್ವಾಮ್ಯದ ಕಛೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಉಚಿತ ಟಿಕೆಟ್‌ ವಿತರಿಸುವ ಸಂದರ್ಭದಲ್ಲಿ ಪರಿಗಣಿಸಬೇಕು.

ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಪಡೆದು, ಶಕ್ತಿ ಸ್ಮಾರ್ಟ್‌ ಕಾರ್ಡ್‌ಗಳನ್ನು ಪಡೆಯಬಹುದು. ಕಾರ್ಡ್​​ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸತಕ್ಕದ್ದು.

ಎಸಿ, ನಾನ್​ ಎಸಿ ಸ್ಲೀಪರ್​ ಬಸ್​ಗಳು ಹಾಗೂ ಎಸಿ ಮತ್ತು ಐಷಾರಾಮಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ. ಅಂದರೆ, ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್​ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್, ಇವಿ ಪವರ್​ ಬಸ್​ಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಅದೇ ರೀತಿ, ಅಂತಾರಾಜ್ಯ ಪ್ರಯಾಣಕ್ಕಿಲ್ಲ ಉಚಿತ ಸೌಲಭ್ಯ ಇಲ್ಲ.

ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಶೇ 50 ಆಸನಗಳನ್ನು ಪುರುಷರಿಗೆ ಮೀಸಲು ಇರಿಸಲಾಗುತ್ತದೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.