ಸುಳ್ಯ: ಎನ್.ಎಂ.ಸಿ. ಎನ್.ಎಸ್.ಎಸ್. ಯೋಜನಾಧಿಕಾರಿ ಸಂಜೀವ ಕುದ್ಪಾಜೆಯವರಿಗೆ ರಕ್ತದಾನ ಸಾಧನೆಗಾಗಿ ರಾಜ್ಯ ಮಟ್ಟದ ಗೌರವ

0

ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಾ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಸಂಜೀವ ಕುದ್ಪಾಜೆಯವರನ್ನು ವಿಶ್ವ ರಕ್ತದಾನಿಗಳ ದಿನದಂದು
ಬೆಂಗಳೂರಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ರಕ್ತದಾನ ಮಹೋನ್ನತ
ಸಾಧನೆಗಾಗಿ ರಾಜ್ಯಮಟ್ಟದ ಗೌರವವನ್ನು ನೀಡಿ ಸನ್ಮಾನಿಸಿದೆ.

1997ರಲ್ಲಿ ತೊಡಿಕಾನದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಯೋಜನಾಧಿಕಾರಿಯಾಗಿ ಪಾದಾರ್ಪಣೆ ಮಾಡಿದ ಬಳಿಕ ನಿರಂತರ ಸುಮಾರು 26 ವರ್ಷಗಳಿಂದ ಕಾಲೇಜಿನ ಎನ್‌.ಎಸ್.ಎಸ್ ಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ
ಇವರು ತಮ್ಮ ಕಾಲೇಜಿನ 25ನೇ ವಾರ್ಷಿಕ ವಿಶೇಷ ಶಿಬಿರವನ್ನು ಜೂ. 19ರಿಂದ ಕಲ್ಲಪಳ್ಲಿಯ ಆದರ್ಶ ಕ್ರೀಡಾ ಸಂಘದ ಆಶ್ರಯದಲ್ಲಿ ಮುನ್ನಡೆಸಲಿದ್ದಾರೆ. ಕಾಲೇಜಿನ ಯೂತ್ ರೆಡ್ ಕ್ರಾಸ್ ಅಧಿಕಾರಿಯಾಗಿ, ಸುಳ್ಯ ರೆಡ್ ಕ್ರಾಸ್ ಘಟಕದ ನಿರ್ದೇಶಕರಾಗಿ 28 ಬಾರಿ ಸ್ವತಃ ರಕ್ತದಾನ ಮಾಡಿರುವುದಲ್ಲದೆ ಸುಮಾರು 25ಕ್ಕಿಂತಲೂ ಹೆಚ್ಚು ರಕ್ತದಾನ ಶಿಬಿರಗಳನ್ನು ಜಿಲ್ಲೆಯಾದ್ಯಂತ ಸಂಘಟಿಸಿದ್ದರು.

2021ರಲ್ಲಿ ಎನ್.ಎಂ.ಸಿ.ಗೆ ಜಿಲ್ಲಾ ಮಟ್ಟದ ಬೆಸ್ಟ್‌ ರೆಡ್ ರಿಬ್ಬನ್ ಪ್ರಶಸ್ತಿಯ ಗರಿ ಲಭಿಸಿರುವುದು ಸಂಜೀವ ಕುದ್ಪಾಜೆಯವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. ವಿದ್ಯಾರ್ಥಿಗಳಿಗೆ ಸಮಾಜಮುಖಿ ಕೆಲಸಗಳಲ್ಲಿ
ತೊಡಗಿಕೊಳ್ಳುವಂತೆ ನಿರಂತರ ಪ್ರೋತ್ಸಾಹಿಸುತ್ತಿರುವ ಇವರು
ಸುಳ್ಯ ರೋಟರಿ ಕ್ಲಬ್ ನಲ್ಲಿ 22 ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡು, ಅಧ್ಯಕ್ಷರಾಗಿದ್ದ ವೇಳೆ ಬಳ್ಳ ಗ್ರಾಮಕ್ಕೆ 8 ಲಕ್ಷ ವೆಚ್ಚದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ, ರೋಟರಿ, ಜಿಲ್ಲೆಯ ಅತ್ಯುತ್ತಮ ಸಮಾಜ ಸೇವಕ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಮರ ಸುಳ್ಯ ರಮಣೀಯ ಸುಳ್ಯ ಎಂಬ ನಗರ ಪಂಚಾಯತ್ ಸಹಭಾಗಿತ್ವದಲ್ಲಿ ಪ್ರತಿ ಗುರುವಾರ ನಡೆಯುವ ಸ್ವಚ್ಚತಾ ಕಾರ್ಯಕ್ರಮದಲ್ಲೂ ಕೈ ಜೋಡಿಸುತ್ತಿರುವ ಇವರು ಜನಸಾಮಾನ್ಯರಿಗೆ
ಅನುಕೂಲವಾಗುವಂತಹ ಹಣ್ಣು, ತರಕಾರಿ, ಜೇನು, ಅಣಬೆ, ಗಿಡ ಮತ್ತು ಬೀಜ ವಿನಿಮಯ ಇತ್ಯಾದಿ 25ಕ್ಕೂ ಹೆಚ್ಚು ವಿವಿಧ ಉಪಯುಕ್ತ ವಾಟ್ಸಾಪ್ ಗುಂಪುಗಳನ್ನು ರಚಿಸಿ, ಜನರನ್ನು ಒಗ್ಗೂಡಿಸಿ ಮರಳಿ ಪರಿಸರಕ್ಕೆ ಬನ್ನಿ ಎನ್ನುವ ಸಂದೇಶ ಸಾರುತ್ತಿದ್ದಾರೆ. ತಮ್ಮ ಮನೆಯಲ್ಲೂ ನೂರಾರು ಬಗೆಯ ಕಳ್ಳಿಗಿಡಗಳು, ಅಕಂಕಾರಿಕ ಗಿಡಗಳು, ವಿವಿಧ ಹಣ್ಣು ಹೂವಿನ ಗಿಡಗಳನ್ನು ಬೆಳೆಸಿ ಕಸಿ ಕಟ್ಟುವ ಹವ್ಯಾಸವನ್ನು
ಬೆಳೆಸಿಕೊಂಡಿರುವುದಲ್ಲದೆ ಜೇನು ಸಾಕಾಣಿಕೆಯನ್ನೂ ಮೈಗೂಡಿಸಿಕೊಂಡಿರುವ ಇವರ ಪತ್ನಿ ಧನಲಕ್ಷ್ಮಿ ಕುದ್ಪಾಜೆ ಅಡ್ಪಂಗಾಯ ಸ.ಹಿ.ಪ್ರಾ. ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದರೆ ಪುತ್ರಿ ಕು. ಗೌರಿ ಎಂ.ಎಸ್ಸಿ ಪದವೀಧರೆಯಾಗಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರ ಗೌತಮ್ ಗುರುವಾಯನಕೆರೆಯ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರ
ಸಮಾಜಮುಖಿ ಕಾರ್ಯವನ್ನು ಒಂದಷ್ಟು ಮಂದಿಗೆ ಪ್ರೇರಣೆಯಾಗಲಿ ಎಂಬುದು ಅವರ ಅಭಿಮಾನಿಗಳ ಆಶಯ.