ಕಾಯ್ದೆಗಳು ಯಥಾವತ್ತಾಗಿ ಮುಂದುವರಿಯಬೇಕು : ಬಿಜೆಪಿ ಮಂಡಲ ಸಮಿತಿ ಆಗ್ರಹ
ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯತೆಯ ಆಧಾರದಲ್ಲಿ ಶಿಕ್ಷಣಗಳು ಸಿಗಬೇಕೆಂಬ ನಿಟ್ಟಿನಲ್ಲಿ ಪಠ್ಯಪುಸ್ತಕಗಳ ಪುನರ್ರಚನೆ ಮಾಡಿತ್ತು. ಆದರೆ ಇದೀಗ ಕಾಂಗ್ರೆಸ್ ಸರಕಾರ ಬಿಜೆಪಿ ಸರಕಾರದ ಅವಧಿಯಲ್ಲಿ ಮಾಡಿರುವ ಕಾಯ್ದೆ ಹಾಗೂ ಪಠ್ಯ ಪುಸ್ತಕ ಪುನರ್ರಚನೆಯನ್ನು ವಾಪಸ್ ಪಡೆದಿದೆ. ಇದನ್ನು ಸುಳ್ಯ ಬಿಜೆಪಿ ಮಂಡಲ ಸಮಿತಿ ಖಂಡಿಸುತ್ತಿದ್ದು, ಕಾಯ್ದೆಗಳು ಈ ಹಿಂದೆ ಇದ್ದಂತೆ ಯಥವತ್ತಾಗಿ ಮುಂದುವರಿಯಬೇಕೆಂದು ಆಗ್ರಹಿಸುತ್ತೇವೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ತಿಳಿಸಿದ್ದಾರೆ.
ಜೂ. ೧೭ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಲವಂತದ ಮತಾಂತರ ಆಗಬಾರದೆನ್ನುವ ನಿಟ್ಟಿನಲ್ಲಿ ನಮ್ಮ ಸರಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದೆ. ಆದರೆ ಕಾಂಗ್ರೆಸ್ ಆಡಳಿತಕ್ಕೆ ಬರುತ್ತಿದ್ದಂತೆ ಹಿಂದುಗಳ ಭಾವನೆಯನ್ನು ಕುಗ್ಗಿಸುವ ಕೆಲಸಕ್ಕೆ ಕೈ ಹಾಕಿ, ಓಟ್ ಬ್ಯಾಂಕ್ ರಾಜಕಾರಣಕ್ಕೆ ಮುಂದಾಗಿದೆ. ಎಪಿಎಂಸಿ ಕಾಯ್ದೆಗೆ ತಿದ್ದು ಪಡಿಯಾದ ಪರಿಣಾಮ ರೈತರಿಗೆ ತುಂಬಾ ಅನೂಕಲವಿತ್ತು. ಮದ್ಯ ವರ್ತಿಗಳಿಲ್ಲದೇ ರೈತರು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರುವ ಅವಕಾಶ ಇತ್ತು. ಮುಕ್ತ ಅವಕಾಶ ನೀಡಲಾಗಿತ್ತು. ಆದರೆ ಇದೀಗ ವಾಪಸ್ ಪಡೆಯುವುದರ ಮೂಲಕ ಈಗಿನ ಸರಕಾರ ರೈತ ವಿರೋಧಿ ನಡೆಯನ್ನಿಟ್ಟಿದೆ. ರಾಷ್ಟ್ರೀಯ ವಿಚಾರಧಾರೆಗಳಡಿಯಲ್ಲಿ ಶಿಕ್ಷಣ ಸಿಗಬೇಕೆನ್ನುವ ನಿಟ್ಟಿನಲ್ಲಿ ಹೆಡ್ಗೇವಾರ್, ಸಾವರ್ಕರ್ ರಂತವರ ಪಾಠಗಳನ್ನು ಸೇರಿಸಲಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಈ ಹಿಂದಿನಂತೆ ಮುಂದುವರಿಯದಿದ್ದರೆ ಬಿಜೆಪಿ ಹೋರಾಟ ಮಾಡಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಗ್ಯಾರಂಟಿ ಈಡೇರಿಸಿ ..!
ಚುನಾವಣೆಯ ಸಂದರ್ಭದಲ್ಲಿ ಪಂಚ ಗ್ಯಾರಂಟಿಗಳನ್ನು ಜನರ ಮುಂದೆ ಇಟ್ಟು ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಈಗ ೧ ಗ್ಯಾರಂಟಿಯನ್ನಷ್ಟೇ ಜಾರಿ ಮಾಡಿದೆ. ೧೦ ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಹೇಳಿದ ಕಾಂಗ್ರೆಸ್ ಈಗ ಕೇಂದ್ರ ಸರಕಾರವನ್ನು ದೂರುತ್ತಿದೆ. ಇವರು ಘೋಷಣೆ ಮಾಡುವ ಸಂದರ್ಭದಲ್ಲಿ ಕೇಂದ್ರವನ್ನು ಕೇಳಿ ಘೋಷಿಸಿದ್ದಾರಾ? ಎಂದು ಕಂಜಿಪಿಲಿ ಪ್ರಶ್ನಿಸಿದರಲ್ಲದೆ. ಕಾಂಗ್ರೆಸ್ ಸರಕಾರ ವಿದ್ಯುತ್, ಮುದ್ರಾಂಕ ಶುಲ್ಕ, ಮದ್ಯ ಶುಲ್ಕ, ಬಸ್ ದರ ಎಲ್ಲವನ್ನು ಏರಿಸಿ ಜನರಿಗೆ ತೆರಿಗೆಯ ಹೊರೆ ನೀಡಿದೆ. ಆದ್ದರಿಂದ ಕಾಂಗ್ರೆಸ್ ಸರಕಾರ ಈಗ ಹೆಚ್ಚು ಮಾಡಿರುವ ದರವನ್ನು ತಕ್ಷಣ ಇಳಿಸಿ ಈ ಹಿಂದೆ ಇದ್ದಂತೆ ಮುಂದುವರಿಸಬೇಕೆಂದು ಅವರು ಆಗ್ರಹಿಸಿದರು.
ಕೇಂದ್ರ ರಬ್ಬರ್ ಬೋರ್ಡ್ ನಿರ್ದೇಶಕ ಮುಳಿಯ ಕೇಶವ ಭಟ್ ಮಾತನಾಡಿ, “ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿ ಜೂ.೩೦ರೊಳಗೆ ಆಗಬೇಕಿತ್ತು. ಆದರೆ ಈ ಸರಕಾರ ಗ್ಯಾರಂಟಿ ಗ್ಯಾರಂಟಿ ಎಂದು ಹೇಳುತ್ತಾ ರೈತರಿಗೆ ಸಿಗಬೇಕಾದ ಯೋಜನೆಯನ್ನೇ ಸರಿಯಾಗಿ ಮಾಡುತ್ತಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸಗಳು ನಡೆಯುತಿತ್ತು ಎಂದು ಹೇಳಿದರಲ್ಲದೆ, ಕಾಂಗ್ರೆಸ್ ಸರಕಾರದಲ್ಲಿ ಅಲ್ಪ ಸಂಖ್ಯಾತ ಓಲೈಕೆ ನಡೆಯುತ್ತಿದೆ. ಗೂಂಡಾಗಿರಿ ಹೆಚ್ಚಾಗುತ್ತಿದೆ ಎಂದ ಅವರು ಮಸೂದ್, ಫಾಝಿಲ್ ಕುಟುಂಬಕ್ಕೂ ಸರಕಾರ ನೆರವು ನೀಡಬೇಕೆಂದು ಈ ಹಿಂದೆಯೇ ಸರಕಾರಕ್ಕೆ ಶಿಫಾರಸು ಹೋಗಿತ್ತು ಎಂದು ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು.
ವಿದೇಶದಿಂದ ರಬ್ಬರ್ ಆಮದು ಆಗುತ್ತಿರುವುದು ರಬ್ಬರ್ ಬೆಲೆ ಕುಸಿತಕ್ಕೆ ಕಾರಣ ಇರಬಹುದು. ಈ ಕುರಿತು ಬೋರ್ಡ್ ಮೀಟಿಂಗ್‌ನಲ್ಲಿ ಚರ್ಚೆಯಾಗಿದ್ದು ಸರಕಾರಕ್ಕೆ ಮನವಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಕೇರಳ ಸರಕಾರ ಅಲ್ಲಿ ರಬ್ಬರ್ ಬೆಳೆಗಾರರಿಗೆ ಬೆಂಬಲ ನೀಡುವಂತೆ ರಾಜ್ಯದಲ್ಲಿಯೂ ನೀಡಬೇಕೆಂದು ನಾವು ಸರಕಾರವನ್ನು ಒತ್ತಾಯಿಸುತ್ತೇವೆ. ಈ ಹಿಂದೆಯೂ ಸರಕಾರದ ಹಂತದಲ್ಲಿ ಪ್ರಯತ್ನ ಮಾಡಿದ್ದೆವು ಎಂದು ಪತ್ರಕರ್ತರ ಪ್ರಶ್ನೆಗೆ ಮುಳಿಯ ಕೇಶವ ಭಟ್ ಉತ್ತರಿಸಿದರು.
ಅಡಿಕೆ ಎಲೆ ಹಳದಿ ರೋಗಕ್ಕೆ ಪರ್ಯಾಯ ಬೆಳೆ ಬೆಳೆಯಲು ಸರಕಾರದಿಂದ ೪ ಕೋಟಿ ಅನುದಾನ ಬಂದಿದೆ. ಈಗ ಸಂಶೋಧನೆಗಾಗಿ ರೂ. ೫೦ ಲಕ್ಷ ಸಂಸದರ ಮುತುವರ್ಜಿಯಿಂದ ಬಿಡುಗಡೆಗೊಂಡಿದೆ ಬಿಜೆಪಿ ನಾಯಕರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ ಪ್ರಮುಖರಾದ ವೆಂಕಟ್ ದಂಬೆಕೋಡಿ, ಸುಭೋದ್ ಶೆಟ್ಟಿ ಮೇನಾಲ, ಶಿವಾನಂದ ಕುಕ್ಕುಂಬಳ, ವಿನಯ ಕುಮಾರ್ ಕಂದಡ್ಕ, ಸುನಿಲ್ ಕೇರ್ಪಳ, ಸುಪ್ರೀತ್ ಮೋಂಟಡ್ಕ, ಮಹೇಶ್ ರೈ ಮೇನಾಲ, ಪ್ರಸಾದ್ ಕಾಟೂರು ಇದ್ದರು.