ಜೂ. 25ರ ವರೆಗೆ ಕಲ್ಲಪಳ್ಳಿಯಲ್ಲಿ ಎನ್.ಎಂ.ಸಿ.ಯ ಎನ್.ಎಸ್.ಎಸ್. ಶಿಬಿರ

0

ಎನ್.ಎಸ್.ಎಸ್. ಮಾನವ ಸಂಬಂಧವನ್ನು ವೃದ್ಧಿಸುತ್ತದೆ – ಕೆ.ವಿ. ಹೇಮನಾಥ್

ಮನುಷ್ಯ ಸಂಬಂಧ, ಭಾವನೆಗಳು ಕಡಿಮೆ ಆಗುತ್ತಿರು ಈ ಕಾಲಘಟ್ಟದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಸಂಬಂಧಗಳನ್ನು ಬೆಳೆಸುತ್ತದೆ. ಎಲ್ಲರೂ ಒಟ್ಟಾಗಿ ಬೆರೆಯುವಾಗ ಮನಸ್ಸಿಗೂ ನೆಮ್ಮದಿ ಸಿಗುತ್ತದೆ ಎಂದು ಸುಳ್ಯದ ಎ. ಓ. ಎಲ್.ಇ ಕಾರ್ಯದರ್ಶಿ ಕೆ. ವಿ. ಹೇಮನಾಥ ಹೇಳಿದರು.

ಅವರು ಜೂ. 19 ರಿಂದ 25ರ ತನಕ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕಲ್ಲಪಳ್ಳಿಯ ಆದರ್ಶ ಕಲಾ ಮತ್ತು ಕ್ರೀಡಾ ಸಂಘದ ಸಹಭಾಗಿತ್ವದೊಂದಿಗೆ ಪೆರುಮುಂಡದಲ್ಲಿ ನಡೆಯುತ್ತಿರುವ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯವೇ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನ್ನು ಬೆಳೆಸುವಂತದ್ದು. ದಿನನಿತ್ಯ ಸಮಾಜದಲ್ಲಿ ನಡೆಯುತ್ತಿರುವ ಕೆಟ್ಟ ವಿದ್ಯಾಮಾನಗಳಿಂದ ಸಂಕುಚಿತಗೊಳ್ಳುತ್ತಿರು ಮನಸ್ಸುಗಳನ್ನು ಎಲ್ಲರೊಂದಿಗೆ ಬೆರೆಯುವಂತೆ ಮಾಡಿ, ವಿವಿಧ ಚಟುವಟಿಕೆಗಳನ್ನು ನೀಡಿ ವಿಕಾಸಗೊಳಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ರುದ್ರಕುಮಾರ್ ಎಂ.ಎಂ ವಹಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಶ್ರೀಕಾಂತ್ ಗೋಳ್ವಲ್ಕರ್, ನ್ಯಾಯವಾದಿ ಎ.ಸಿ‌. ನಂದನ್, ಸ್ವಾಗತ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಪೆರುಮುಂಡ, ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಘದ ಸ್ಥಾಪಕ ಸದಸ್ಯ ಬಾಲಚಂದ್ರ ಪಿ.ಎ, ಸಂಘದ ಅಧ್ಯಕ್ಷ ಸೃಜಿತ್ ಪೆರುಮುಂಡ, ಆದರ್ಶ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜುಳಾ ಗೋಪಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಸ್ಥಾಪಕ ಅಧ್ಯಕ್ಷ ಪಿ.ಕೆ. ಬಾಲಚಂದ್ರ, ಶಿಬಿರಾಧಿಕಾರಿಗಳು, ಶಿಬಿರದ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎನ್.ಎಸ್.ಎಸ್ ಘಟಕ 2ರ ಯೋಜನಾಧಿಕಾರಿ ಸಂಜೀವ ಕುದ್ಪಾಜೆ ಪ್ರಾಸ್ತವಿಕ ಮಾತುಗಳನ್ನಾಡಿದರು. ಎನ್.ಎಸ್.ಎಸ್ ಘಟಕ 1ರ ಅಧಿಕಾರಿ ಶ್ರೀಮತಿ ಚಿತ್ರಲೇಖ ಕೆ.ಎಸ್ ಸ್ವಾಗತಿಸಿ, ಘಟಕದ ನಾಯಕಿ ನಿಶ್ಮ. ಡಿ.ಸಿ ವಂದಿಸಿದರು. ಶಿಬಿರಾರ್ಥಿ ಗಾನ ಬಿ.ಡಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಅತಿಥಿಗಳನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ನ್ಯಾಯವಾದಿ ಎ.ಸಿ ನಂದ‌ನ್ ಎನ್.ಎಸ್.ಎಸ್. ಬ್ಯಾಂಡ್ ಬಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಆದರ್ಶ ಮಹಿಳಾ ಸಂಘದ ಸದಸ್ಯರು ಕುಣಿತ ಭಜನೆಯ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.