ಕೊಳ್ತಿಗೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಪೂರ್ಣಿಮಾ ತೋಟಪ್ಪಾಡಿಯವರಿಗೆ ಯುವ ಸಾಧಕ ಪ್ರಶಸ್ತಿ

0

ಕೊಳ್ತಿಗೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪೆರ್ಲಂಪಾಡಿ ಮನೆಯ ಪರಮೇಶ್ವರ ಗೌಡರ ಪತ್ನಿ ಶ್ರೀಮತಿ ಪೂರ್ಣಿಮಾ ತೋಟಪ್ಪಾಡಿಯವರಿಗೆ ಯುವ ಸಾಧಕ ಪ್ರಶಸ್ತಿ ಲಭಿಸಿದೆ.


ಕೊಳ್ತಿಗೆ ಗ್ರಾಮ ಸಾಹಿತ್ಯ ಸಂಭ್ರಮ 2023 ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಇವರು ಮಾಡಿರುವ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಮತ್ತು ಗ್ರಾಮ ಸಮಿತಿ ಅಧ್ಯಕ್ಷರಾ ನಾರಾಯಣ ಕುಂಬ್ರ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಪ್ರಶಸ್ತಿ ನೀಡಿ ಗೌರವಿಸಿದರು.

ಪೆರ್ಲಂಪಾಡಿಯಲ್ಲಿ ಮಿಥಿಲೇಶ್ ಆರ್ಟ್ಸ್ ಮತ್ತು ಗ್ರೀಷ್ಮಾ ಗ್ರೀನ್ ನರ್ಸರಿಯ ಮಾಲಕರಾಗಿರುವ ಆರ್ಟಿಸ್ಟ್ ಪರಮೇಶ್ವರ ಗೌಡರ ಪತ್ನಿಯಾಗಿರುವ ಇವರು ಮಂಡೆಕೋಲು ಗ್ರಾಮದ ಕುಕ್ಕೇಟಿ ಲಿಂಗಪ್ಪ ಗೌಡ ತೋಟಪ್ಪಾಡಿ ಮತ್ತು ಶ್ರೀಮತಿ ಗಿರಿಜಾ ದಂಪತಿಯ ಪುತ್ರಿ. ಸುಳ್ಯದಲ್ಲಿ ಮಹಿಳಾ ಕಂಡಕ್ಟರ್ ಆಗಿ, ಕುಕ್ಕೇಟಿ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿರುವ ಇವರು ಸುಳ್ಯ ಚಂದನ ಸಾಹಿತ್ಯ ವೇದಿಕೆ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು, ಬೆಳ್ಳಾರೆ ಜೇಸೀಸ್ ಇದರ ಸಕ್ರೀಯ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಕ್ತಿಗೀತೆ, ಹಾಡು, ಕವನವಾಚನ, ಕಥೆ ರಚನೆ, ಭಜನೆ, ಕುಣಿತ ಭಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರಿಗೆ ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸಂಘ 2022ರಲ್ಲಿ‌ ಸಾಧಕ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಿರುವುದಲ್ಲದೆ ಹಲವು ಸಮ್ಮೇಳನಗಳಲ್ಲಿ ಪ್ರಶಸ್ತಿ, ಸನ್ಮಾನಗಳನ್ನು ಪಡೆದಿರುತ್ತಾರೆ.