ನಿರಂತರ ಸುರಿಯುತ್ತಿರುವ ವರ್ಷಧಾರೆ: ಎಲ್ಲೆಲ್ಲೂ ನೀರೇ ನೀರು

0

ರಾಷ್ಟ್ರೀಯ ಹೆದ್ದಾರಿಯಲ್ಲಿ ಚರಂಡಿ ಅವ್ಯವಸ್ಥೆ: ಮಳೆಗೆ ಹೊಳೆಯಾಗುತ್ತಿದೆ ರಸ್ತೆ

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ತಾಲೂಕಿನ ಕನಕಮಜಲಿನಿಂದ ಸುಳ್ಯದವರೆಗೆ ಮಳೆನೀರು ಹರಿದು ಹೋಗಲು ಅಲ್ಲಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣದಿಂದಾಗಿ ಮಳೆನೀರು ಮುಖ್ಯರಸ್ತೆಯ ಮೂಲಕವೇ ಹರಿದು ಹೋಗುತ್ತಿದೆ.

ಮಳೆಗಾಲ ಪ್ರಾರಂಭಗೊಂಡಿದ್ದು, ಹೆದ್ದಾರಿಯ ಅಲ್ಲಲ್ಲಿ ರಸ್ತೆಯಲ್ಲೇ ಮಳೆನೀರು ತುಂಬಿಕೊಂಡಿದ್ದು, ವಾಹನ ಸವಾರರಿಗೆ ಸಂಚರಿಸಲು ತುಂಬಾನೇ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮಳೆಗಾಲ ಪ್ರಾರಂಭದ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಜೆಸಿಬಿ ಮೂಲಕ ಚರಂಡಿ ದುರಸ್ತಿ ಪಡಿಸಲಾಗಿದೆಯಾದರೂ, ಅದು ಸಂಪೂರ್ಣವಾಗಿ ಕಾರ್ಯಗತಗೊಂಡಿಲ್ಲ.

ಜೋರಾಗಿ ಮಳೆ ಸುರಿದ ಸಂದರ್ಭದಲ್ಲಿ ರಸ್ತೆಯಲ್ಲಿಯೇ ನೀರು ತುಂಬಿ ನಿಲ್ಲುತ್ತಿದ್ದು, ಪಾದಚಾರಿಗಳಿಗೂ ನಡೆದಾಡಲು ಕಷ್ಟಕರವಾದ ಪರಿಸ್ಥಿತಿ ಹಲವೆಡೆ ಇದೆ. ದ್ವಿಚಕ್ರ ವಾಹನ ಸವಾರರಿಗೂ ಇದು ಸವಾಲಾಗಿದ್ದು, ಕಳೆದ ವರ್ಷವೂ ಮಳೆಗಾಲದ ಸಂದರ್ಭದಲ್ಲಿ ಇದೇ ಪರಿಸ್ಥಿತಿ ನಿರ್ಮಾಣಗೊಂಡಿತ್ತು.

ಮುಖ್ಯವಾಗಿ ಕನಕಮಜಲು, ಸುಣ್ಣಮೂಲೆ, ಕದಿಕಡ್ಕ, ಜಾಲ್ಸೂರು ಪೇಟೆ, ಅಡ್ಕಾರು, ಬೊಳುಬೈಲು ಹಾಗೂ ಹಳೆಗೇಟಿನಲ್ಲಿ ಜೋರಾಗಿ ಮಳೆ ಸುರಿದ ಸಂದರ್ಭದಲ್ಲಿ ಚರಂಡಿ ಇಲ್ಲದ ಕಾರಣದಿಂದಾಗಿ ಮಳೆನೀರು ರಸ್ತೆಯಲ್ಲಿ ಹರಿಯುತ್ತಿದೆ. ಪೈಚಾರಿನ ಸೇತುವೆ ಬಳಿಯೂ ಈ ಬಾರಿ ಸೇತುವೆ ಕಾಮಗಾರಿ ನಡೆದಿದ್ದು, ಅಲ್ಲಿ ಮಳೆನೀರು ಹರಿದುಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ.