ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು; ಡಾ.ಕೆ.ವಿ.ಚಿದಾನಂದ
ಈ ಗೌರವ ಮುಂದಿನ ಶೈಕ್ಷಣಿಕ ಸಾಧನೆಗೆ ಪೂರಕ; ಶಾಸಕಿ ಭಾಗೀರಥಿ ಮುರುಳ್ಯ
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಈ ಬಾರಿಯ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಶೇ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಇಂದು ಸುಳ್ಯ ಕನ್ನಡ ಭವನದಲ್ಲಿ ನಡೆಯಿತು.
ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಕಾರ್ಯವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕನ್ನಡದಲ್ಲಿ ಶೇ 100 ಅಂಕ ಪಡೆದ ವಿದ್ಯಾರ್ಥಿಗಳ ಗೌರವಾರ್ಪಣೆ ಕಾರ್ಯಕ್ರಮ ಕಸಾಪ ಆಯೋಜನೆ ಮಾಡಿದ ಆರಂಭದಲ್ಲಿ ಕೇವಲ 12 ಮಕ್ಕಳು ಮಾತ್ರ ಇಂಥ ಸನ್ಮಾನಕ್ಕೆ ಭಾಜನರಾಗಿದ್ದರು.ಇಂದು 91 ಮಂದಿ ಇಂತಹ ಸಾಧನೆ ಮಾಡಿರುವುದು ನಮಗೆಲ್ಲಾ ಹೆಮ್ಮೆ.ವಿದ್ಯಾರ್ಥಿಗಳು ಓದುವ ಹವ್ಯಾಸ ವನ್ನು ಬೆಳೆಸಿಕೊಂಡಾಗ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದ ಅವರು ಕ.ಸಾ.ಪ.ದ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಸ್ಮರಣಿಕೆ, ಸನ್ಮಾನ ಪತ್ರ, ಶಾಲು ನೀಡಿ ಗೌರವಿಸಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದರು.
ಸುಳ್ಯ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ಶ್ರೀಮತಿ ಯು.ಕೆ.ಶೀತಲ್ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಕ.ಸಾ.ಪ.ಪೂರ್ವಾಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕ.ಸಾ.ಪ.ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ, ಗೌರವ ಕಾರ್ಯದರ್ಶಿ ಗಳಾದ ತೇಜಸ್ವಿ ಕಡಪಳ, ಶ್ರೀಮತಿ ಚಂದ್ರಮತಿ ಕೆ., ಗೌರವ ಕೋಶಾಧಿಕಾರಿ ದಯಾನಂದ ಆಳ್ವ,ಕಾರ್ಯಕ್ರಮ ಸಂಯೋಜಕ ರಮೇಶ್ ನೀರಬಿದಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಹಾಗೂ ಕನ್ನಡ ಶಿಕ್ಷಕರು ಮತ್ತು ಗೌರವ ಕನ್ನಡ ಶಿಕ್ಷಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗಾಯಕ ಕೆ.ಆರ್.ಗೋಪಾಲಕೃಷ್ಣ ಆಶಯಗೀತೆ ಹಾಡಿದರು. ಕಾರ್ಯಕ್ರಮ ಸಂಯೋಜಕ ರಮೇಶ್ ನೀರಬಿದಿರೆ ಸ್ವಾಗತಿಸಿ, ಗೌರವಾರ್ಪಣೆ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.ಗೌ.ಕಾರ್ಯದರ್ಶಿ ತೇಜಸ್ವ ಕಡಪಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ನಿರ್ದೆಶಕಿ ಸಾವಿತ್ರಿ ಕಣೆಮರಡ್ಕ ವಂದಿಸಿದರು. ಕಸಾಪ ನಿರ್ದೇಶಕಿ ಲತಾಶ್ರೀ ಸುಪ್ರಿತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.