ಪೊಲೀಸರಿಂದ ಹುಡುಕಾಟ ಆರಂಭ
ಇಂದು ಪೂರ್ವಾಹ್ನ 11 ಗಂಟೆಯ ಸುಮಾರಿಗೆ ಮಡಿಕೇರಿ ತಾಲೂಕು ಚೆಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿ ಅಣ್ಣನನ್ನು ಕೊಂದ ತಮ್ಮಂದಿರು ಪರಾರಿಯಾಗಿದ್ದು, ಅವರನ್ನು ಪೊಲೀಸರು ಹುಡುಕಾಡತೊಡಗಿದ್ದಾರೆ.
ಮೂಲತಃ ಪುತ್ತೂರಿನ ಸಂಟ್ಯಾರಿನವರಾಗಿದ್ದ ಇಬ್ರಾಹಿಂ ಹಾಜಿ ಎಂಬವರು ಅರಂತೋಡಿಗೆ ಬಂದು ನೆಲೆಸಿ ಕುದ್ರೆಪಾಯದಲ್ಲಿ ಸುಮಾರು ೫೦ ಎಕ್ರೆ ಭೂಮಿ ಖರೀದಿಸಿ ಕೃಷಿ ಆರಂಭಸಿದ್ದರು. ಇಬ್ರಾಹಿಂರವರು ಸುಮಾರು ೨೫ ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಭೂಮಿಯನ್ನು ಪುತ್ರ ಉಸ್ಮಾನ್ ನೋಡಿಕೊಳ್ಳುತ್ತಿದ್ದರೆನ್ನಲಾಗಿದೆ. ಆ ಬಳಿಕ ಇಬ್ರಾಹಿಂರಿಗೆ ೭ ಮಂದಿ ಪುತ್ರರು ಮತ್ತು ಮೂವರು ಪುತ್ರಿಯರು. ಜಾಗದ ವಿಚಾರವಾಗಿ ಗಂಡು ಮಕ್ಕಳಲ್ಲಿ ತಕರಾರು ಬಂದು ಪಾಲು ಮಾಡಿಕೊಡಲಾಗಿತ್ತು. ಆದರೆ ಉಸ್ಮಾನ್‌ರಿಗೆ ಹೆಚ್ಚು ಜಾಗ ಸಿಕ್ಕಿದೆ ಎಂದು ರಫೀಕ್, ಸತ್ತಾರ್ ಮತ್ತಿತರ ಕೆಲವು ಸಹೋದರರು ತಕರಾರು ತೆಗೆದಿದ್ದರೆಂದು, ಈ ಹಿನ್ನಲೆಯಲ್ಲಿ ಅವರೊಳಗೆ ಯಾವಾಗಲೂ ಜಗಳವಾಗುತ್ತಿತ್ತೆಂದು ಹೇಳಾಗುತ್ತಿದೆ. ಉಸ್ಮಾನ್(65 ವರ್ಷ) ತಮ್ಮ ಕುಟುಂಬದೊಂದಿಗೆ ಪುತ್ತೂರಿನ ಸಂಪ್ಯದಲ್ಲಿ ನೆಲೆಸಿದ್ದು, ಪ್ರತಿ ಶುಕ್ರವಾರ ಕುದ್ರೆಪಾಯದ ತಮ್ಮ ತೋಟಕ್ಕೆ ಬರುತ್ತಿದ್ದರು. ರಫೀಕ್ ಮತ್ತು ಮಾಯಿಂಞಿ ಎಂದಿಬ್ಬರು ಸಹೋದರು ಅರಂತೋಡಿನಲ್ಲಿ ನೆಲೆಸಿದ್ದರೆ, ಸತ್ತಾರ್ ಮಡಿಕೇರಿಯ ಹಾಕತ್ತೂರಿನಲ್ಲಿದ್ದರು. ಇತರ ಸಹೋದರರು ಇತರೆಡೆಗಳಲ್ಲಿ ವಾಸಿಸುತ್ತಿದ್ದರು.
ಇಂದು ಕುದ್ರೆಪಾಯದ ಜಾಗದಲ್ಲಿ ಸರ್ವೆ ಇತ್ತೆನ್ನಲಾಗಿದೆ. ಅದಕ್ಕಾಗಿ ಉಸ್ಮಾನ್‌ರವರಲ್ಲದೆ ರಫೀಕ್ ಮತ್ತು ಸತ್ತಾರ್ ಕೂಡಾ ಕುದ್ರೆಪಾಯಕ್ಕೆ ಬಂದಿದ್ದರು. ಸರ್ವೆಗೆ ಬಂದಿದ್ದ ಅಧಿಕಾರಿಗಳು ತಮ್ಮ ಕಾರ್ಯ ಮುಗಿಸಿ ದೂರದಲ್ಲಿ ಇದ್ದ ಸಂದರ್ಭ ಉಸ್ಮಾನ್, ರಫೀಕ್, ಸತ್ತಾರ್ ಅವರ ಜಾಗದ ಸಮೀಪ ರಸ್ತೆ ಬದಿ ನಿಂತು ಮಾತನಾಡುತ್ತಿದ್ದರು. ಮಾತಿಗೆ ಮಾತು ಬೆಳೆದು ತಮ್ಮಂದಿರಾದ ರಫೀಕ್ ಮತ್ತು ಸತ್ತಾರ್ ಅಣ್ಣ ಉಸ್ಮಾನ್‌ರಿಗೆ ಚೂರಿಯಿಂದ ಇರಿದರು. ಪರಿಣಾಮವಾಗಿ ರಫೀಕ್ ಕುಸಿದು ಬಿದ್ದರು. ದೂರದಲ್ಲಿದ್ದ ಸರ್ವೆ ಅಧಿಕಾರಿಗಳು ಮತ್ತಿತರರು ಕಿರುಚಾಟದ ಶಬ್ದ ಕೇಳಿ ಸ್ಥಳಕ್ಕೆ ಓಡಿ ಬಂದಾಗ ರಫೀಕ್ ಮತ್ತು ಸತ್ತಾರ್ ಇಬ್ಬರೂ ಪರಾರಿಯಾಗಿದ್ದಾರೆನ್ನಲಾಗಿದೆ. ಅವರು ರಿಕ್ಷಾವೊಂದರಲ್ಲಿ ಸುಳ್ಯದ ಕಡೆಗೆ ಬಂದು ಪರಾರಿಯಾಗಿದ್ದಾರೆಂದು ಹೇಳಲಾಗಿದೆ.
ಕೊಡಗು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮಡಿಕೇರಿ ಡಿವೈಎಸ್‌ಪಿ ಸುಂದರ್‌ರಾಜ್ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಹಾಗೂ ಸಂಪಾಜೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮಹಜರು ನಡೆಸಿದ್ದಾರೆ. ಇದೀಗ ಉಸ್ಮಾನ್‌ರ ಮೃತದೇಹವನ್ನು ಪೋಸ್ಟ್‌ಮಾರ್ಟಂಗೆ ಕೊಂಡೊಯ್ಯಲಾಯಿತೆಂದು ತಿಳಿದು ಬಂದಿದೆ.