ಕನಕಮಜಲು : ಚಿನ್ನಾಭರಣ ಕಳವು ಪ್ರಕರಣ

0

ಎದುರಿನ ಬಾಗಿಲು ಒಡೆಯಲಾಗದೆ, ಹಿಂಬದಿ ಬಾಗಿಲು ಒಡೆದು ಒಳ ಪ್ರವೇಶಿಸಿದ್ದ ಕಳ್ಳರು

ಕನಕಮಜಲು ಗ್ರಾಮದ ಬುಡ್ಲೆಗುತ್ತು ಯುರೇಶ್ ಅವರ ಮನೆಯಲ್ಲಿ ಚಿನ್ನಾಭರಣ ಕಳವು ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸ್ ಶ್ವಾನದಳ ಮನೆಗೆ ಆಗಮಿಸುತ್ತಿದೆ ಎಂದು ತಿಳಿದುಬಂದಿದೆ.

ಜು.16ರಂದು ಸಂಜೆ ಯುರೇಶರ ಚಿಕ್ಕಮ್ಮ ನಿಧನರಾಗಿದ್ದರಿಂದ ಯುರೇಶರು ಮತ್ತು ಅವರ ಪತ್ನಿ ಭವಾನಿಯವರು ಅವರ ಅಂತ್ಯಕ್ರಿಯೆಗೆ ತೆರಳಿದ್ದರು. ಸಂಜೆ 6 ಗಂಟೆಗೆ ಹೋದವರು ರಾತ್ರಿ 12.30 ಕ್ಕೆ ಮನೆಗೆ ಹಿಂತಿರುಗಿದಾಗ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿರುವುದು ಗೊತ್ತಾಯಿತೆನ್ನಲಾಗಿದೆ. ಕಳ್ಳರು ಮನೆಯ ಮುಂಭಾಗದ ಬಾಗಿಲು ಮುರಿಯಲು ಯತ್ನಿಸಿ ಸಾಧ್ಯವಾಗದೆ ಮನೆಯ ಹಿಂಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ ಕಪಾಟಿನ ಬೀಗ ಒಡೆದು ಒಳಗೆ ಇರಿಸಲಾಗಿದ್ದ ಚಿನ್ನಾಭರಣವನ್ನು ಕಳವುಗೈದು ಪರಾರಿಯಾಗಿದ್ದಾರೆ. ಪತ್ನಿ, ಪುತ್ರಿ, ಸೊಸೆಯ ಚಿನ್ನಾಭರಣಗಳೆಲ್ಲ ಸೇರಿ ಸುಮಾರು 30 ಪವನ್ ನಷ್ಟು ಚಿನ್ನ ಕಳ್ಳತನವಾಗಿರುವುದಾಗಿ ಹೇಳಲಾಗುತ್ತಿದೆ.


ಯುರೇಶರು ರಾತ್ರಿಯೇ ತಮ್ಮ ಕುಟುಂಬದ ಸದಸ್ಯರಿಗೆ ವಿಷಯ ತಿಳಿಸಿ, ಸುಳ್ಯ ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ರಾತ್ರಿಯೇ ಮನೆಗೆ ಆಗಮಿಸಿ ಮಾಹಿತಿ ಪಡೆದುಕೊಂಡರು.


ಜು.17ರಂದು ಬೆಳಿಗ್ಗೆ ಸುಳ್ಯ ಪೊಲೀಸ್ ಠಾಣೆಯ ಕ್ರೈಮ್ ವಿಭಾಗದ ಪೊಲೀಸರು, ಸರ್ಕಲ್ ಇನ್ಸ್ ಪೆಕ್ಟರ್ ನವೀ‌ನ್ ಚಂದ್ರ ಜೋಗಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಂದ ಕಳವಾಗಿರುವ ಚಿನ್ನಾಭರಣದ ಬಗ್ಗೆ ಮಾಹಿತಿ ಕೇಳಿ ಪಡೆದುಕೊಂಡರು. ಮಂಗಳೂರಿನಿಂದ ಶ್ವಾನದಳ ಮನೆಗೆ ಆಗಮಿಸುತ್ತಿರುವುದಾಗಿ ತಿಳಿದುಬಂದಿದೆ.