ಗೃಹಲಕ್ಷ್ಮಿ ಯೋಜನೆಯ ಮಾಹಿತಿ ನೀಡಲು ಕಾಂಗ್ರೆಸ್‌ನಿಂದ ವಾರ್ಡ್ ಮಟ್ಟದ ಸಭೆ ಮತ್ತು ಮನೆ ಭೇಟಿ : ಎಂ. ವೆಂಕಪ್ಪ ಗೌಡ

0


ರಾಜ್ಯದ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ಸ್ವೀಕಾರ ಆರಂಭಗೊಂಡಿದೆ. ಸುಳ್ಯ ನಗರದಲ್ಲಿ ಸುಮಾರು ೧೦ಸಾವಿರ ಮನೆಗಳಿದ್ದು, ನಗರ ಪಂಚಾಯತ್‌ನಲ್ಲಿರುವ ೨ ಕೌಂಟರ್‌ಗಳು ಹಾಗೂ ತಾಲೂಕು ಕಚೇರಿ ಎದುರು ಇರುವ ಕರ್ನಾಟಕ ಒನ್ ಕೇಂದ್ರ ಸೇರಿ ನಿನ್ನೆಯವರೆಗೆ ಒಟ್ಟು ೧೩೮೫ ಮನೆಗಳವರು ನೋಂದಾಯಿಸಿಕೊಂಡಿದ್ದಾರೆ. ಇನ್ನುಳಿದವರು ನೋಂದಾಯಿಸಿಕೊಳ್ಳುವಂತೆ ಮಾಡಲು ಜಾಗೃತಿ ಅಭಿಯಾನ ಅಗತ್ಯವಿದ್ದು, ಸುಳ್ಯ ನಗರ ಕಾಂಗ್ರೆಸ್‌ನ ವತಿಯಿಂದ ನ.ಪಂ. ಸದಸ್ಯರುಗಳ ನೇತೃತ್ವದಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ ಜಾಗೃತಿ ಸಭೆ ಹಾಗೂ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನ.ಪಂ. ಸದಸ್ಯ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ತಿಳಿಸಿದ್ದಾರೆ.


ಇಂದು ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ವಿಷಯ ಪ್ರಕಟಿಸಿದರಲ್ಲದೆ ಜು. 3೦ರಂದು ಆದಿತ್ಯವಾರ ಮಾಹಿತಿ ಕಾರ್ಯಕ್ರಮವನ್ನು ದುಗಲಡ್ಕದಿಂದ ಆರಂಭಿಸುತ್ತೇವೆ. ಗೃಹಲಕ್ಷ್ಮಿಗೆ ಅರ್ಜಿ ಹಾಕಲು ಮನೆಯೊಡತಿಯೇ ಬರಬೇಕಾಗಿಲ್ಲ. ಅವರ ಮಕ್ಕಳು ಅಥವಾ ಮೊಮ್ಮಕ್ಕಳು ಬಂದರೂ ಆಗುತ್ತದೆ. ಆದರೆ ಮನೆಯೊಡತಿಯ ಫೋನ್ ತರಬೇಕಾಗುತ್ತದೆ ಎಂದು ಅವರು ಹೇಳಿದರು.
ತಾಲೂಕಿನಾದ್ಯಂತ ಎಲ್ಲಾ ಕಾಂಗ್ರೆಸ್ ನಾಯಕರು ಈ ಕೆಲಸ ಮಾಡಬೇಕು. ಪಕ್ಷವನ್ನು ಸದೃಡಗೊಳಿಸಬೇಕು ಎಂದರು.

ಭಾಗೀರಥಿಯವರು ಹಳದಿ ರೋಗದ ಬಗ್ಗೆ ಮಾತನಾಡಬೇಕಿತ್ತು :
ನಮ್ಮ ಕ್ಷೇತ್ರದ ನೂತನ ಶಾಸಕಿ ಭಾಗೀರಥಿ ಮುರುಳ್ಯರವರು ಸಮಸ್ಯೆಗಳಾದಲ್ಲಿಗೆಲ್ಲ ಹೋಗುತ್ತಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅವರು ವಿಧಾನಸಭೆಯಲ್ಲಿ ತನ್ನ ಕ್ಷೇತ್ರದ ಬೇಡಿಕೆಯ ಕುರಿತು ಧ್ವನಿ ಎತ್ತಬೇಕಾಗಿತ್ತು. ಅರಮನೆಗಯದಲ್ಲಿ ಸೇತುವೆ ಆಗಬೇಕಾಗಿದೆ. ಅದನ್ನು ಮಾತನಾಡಿಲ್ಲ. ಬೆಳೆ ವಿಮೆಯ ಬಗ್ಗೆ ಮಾತನಾಡಿಲ್ಲ. ನಮ್ಮ ಪುತ್ತೂರು ಶಾಸಕರಾದ ಅಶೋಕ್ ರೈಯವರು ಹೇಗೆ ಮಾತನಾಡುತ್ತಿದ್ದಾರೆ ನೋಡಿ. ನಾನಾಗಿದ್ದರೆ ಅಡಿಕೆ ಹಳದಿ ರೋಗದ ವಿಚಾರವನ್ನು ಪ್ರಥಮ ಪ್ರಶ್ನೆಯಾಗಿ ಕೇಳುತ್ತಿದ್ದೆ. ಇಂತಹ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದಿರುವ ಕಾರಣ ಜನ ಅವರ ಬಗ್ಗೆ ಭ್ರಮ ನಿರಸನಗೊಂಡಿದ್ದಾರೆ. ಮುಂದಾದರೂ ಜನರ ಸಮಸ್ಯೆ ಪರಿಹರಿಸಲು ಮುಂದಾಗಲಿ ಎಂದು ಹೇಳಿದ ವೆಂಕಪ್ಪ ಗೌಡರು, ನಾವು ಕಾಂಗ್ರೆಸ್‌ನವರು ಜನರಿಗೆ ಬೇಕಾದುದನ್ನು ಮಾತ್ರ ಮಾತನಾಡುತ್ತೇವೆ, ಕೆಲಸ ಮಾಡುತ್ತೇವೆ. ಬೆಳೆ ವಿಮೆಯ ಬಗ್ಗೆ ಅಶೋಕ್ ರೈಯವರು ಸದನದಲ್ಲಿ ಮಾತನಾಡಿದ್ದಾರೆ. ಬೆಳೆ ವಿಮೆ ಕಂತು ಸ್ವೀಕರಿಸಲು ಆದೇಶವಾಗಿದೆ. ನನ್ನ ಬಗ್ಗೆ ಕಮೆಂಟ್ ಮಾಡಿದ ಹರೀಶ್ ಕಂಜಿಪಿಲಿ ಇದನ್ನು ತಿಳಿದುಕೊಳ್ಳಲಿ ಎಂದು ಅವರು ಹೇಳಿದರು.


ಉಡುಪಿ ಪ್ರಕರಣ ತಲೆ ತಗ್ಗಿಸುವಂತದ್ದು. ಅದನ್ನು ನಾವು ಖಂಡಿಸುತ್ತೇವೆ. ಆದರೆ ಇದರಲ್ಲಿ ಬಿಜೆಪಿಯವರು ನಡೆದುಕೊಂಡ ರೀತಿ ನಾಚಿಕೆ ಗೇಡುತನದ್ದು. ಇದರಲ್ಲಿ ಹಿಂದೂ, ಮುಸ್ಲಿಂ ಎಂದು ಹೇಳುತ್ತಿರುವುದು ಸರಿಯಲ್ಲ. ಅಲ್ಲಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ಬಂದಿದ್ದಾರೆ. ಬರಲಿ. ಆದರೆ ಮಣಿಪುರಕ್ಕೆ ಯಾಕೆ ಹೋಗುತ್ತಿಲ್ಲ? ಅಲ್ಲಿ ಸಾಮೂಹಿಕ ಅತ್ಯಾಚಾರವಾಗುತ್ತಿದೆ, ಬೆತ್ತಲೆ ಮೆರವಣಿಗೆಯಾಗುತ್ತಿದೆ. ಅದು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ? ನೀವು ಕುರುಡರಾ? ಮನುಷ್ಯರಾ? ಅಥವಾ ಪ್ರಾಣಿಗಳಾ? ಉತ್ತರಿಸಿ ಎಂದು ವೆಂಕಪ್ಪ ಗೌಡರು ಹೇಳಿದರು.


ನಗರ ಪಂಚಾಯತ್ ವಿಪಕ್ಷ ನಾಯಕ ಬಾಲಕೃಷ್ಣ ಭಟ್ ಕೊಡೆಂಕಿರಿ, ಸದಸ್ಯ ಡೇವಿಡ್ ಧೀರಾ ಕ್ರಾಸ್ತಾ, ಮುಖಂಡರಾದ ಗೋಕುಲ್‌ದಾಸ್ ಮತ್ತು ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.