ಬೆಳೆವಿಮೆ ನೋಂದಣಿಯಲ್ಲಿಯ ಸಮಸ್ಯೆ : ಸುಳ್ಯ ಸಿ.ಎ. ಬ್ಯಾಂಕ್ ಗೆ ಅಧಿಕಾರಿಗಳ ಭೇಟಿ – ಪರಿಶೀಲನೆ

0

ಬೆಳೆವಿಮೆ ನೋಂದಣಿ ಕುರಿತು ಇರುವ ಸಮಸ್ಯೆಗಳ ಬಗ್ಗೆ ಟಾಟಾ ಎ.ಐ.ಜಿ ಇನ್ಶೂರನ್ಸ್ ಕಂಪನಿಯ ಹಿರಿಯ ಅಧಿಕಾರಿಗಳು ಸುಳ್ಯ ಸಿ.ಎ ಬ್ಯಾಂಕ್ ಗೆ ಭೇಟಿ ನೀಡಿದಾಗ ಪ್ರಾಕ್ಟಿಕಲ್ ನೋಂದಣಿ ಮಾಡುವ ಮೂಲಕ ಸರ್ವರ್ ಸಮಸ್ಯೆಯ ಕುರಿತು ತಿಳಿಸಿ ಕೊಡಲಾಯಿತು. ಕೃಷಿಕರಿಗೆ ಸಹಕಾರವಾಗುವ ದೃಷ್ಟಿಯಿಂದ ನೋಂದಣಿ ಅವಧಿ ವಿಸ್ತರಿಸಿ ಡಾಟಾ ಎಂಟ್ರೀ ಕುರಿತು ಸಮಯಾವಕಾಶ ಹೆಚ್ಚಿಸುವ ಬಗ್ಗೆ ಕೇಂದ್ರ ಸರಕಾರದೊಂದಿಗೆ ಸೋಮವಾರ ಕಂಪನಿ ಮತ್ತು ಸರಕಾರಿ ಅಧಿಕಾರಿಗಳ ಜೊತೆ ನಡೆಯುವ ಸಭೆಯಲ್ಲಿ ಚರ್ಚಿಸುವುದಾಗಿ ವಿಮಾ ಕಂಪನಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ ಸೂರ್ತಿಲ ತಿಳಿಸಿದ್ದಾರೆ. ಡಿಸಿಸಿ ಬ್ಯಾಂಕ್ ಅಧಿಕಾರಿ ಲಿಂಗರಾಜು ಅವರು ಈ ಸಂದರ್ಭ ಉಪಸ್ಥಿತರಿದ್ದರು.


14.08.2023ರೊಳಗೆ ಸಹಕಾರ ಸಂಘಗಳ ಸಿಬ್ಬಂದಿಗಳು ಬೆಳೆ ವಿಮೆ ಮಾಡಿಸಿದ ರೈತರ ಮಾಹಿತಿಯನ್ನು ಸರ್ವರ್ ಗೆ ಅಪ್ ಲೋಡ್ ಮಾಡಿ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಡಾಟಾ ಅಪ್ರೂವ್ ಮಾಡಬೇಕಿರುವ ಕಾರಣ ತಡರಾತ್ರಿವರೆಗೆ ಸಹಕಾರ ಸಂಘದ ಸಿಬ್ಬಂದಿಗಳು ಡಾಟಾ ಎಂಟ್ರೀ ಕೆಲಸ ಮಾಡುವ ಪರಿಸ್ಥಿತಿ ಇದೆ. ಹಗಲು ಪುನಹ ಸಂಘದ ಮಾಮೂಲು ವ್ಯವಹಾರಕ್ಕೆ ಸಿಬ್ಬಂದಿಗಳು ಹಾಜರಾಗಬೇಕಿರುವುದರಿಂದ ಪ್ರತೀ ಸಹಕಾರ ಸಂಘದಲ್ಲಿ ಅಡಿಕೆ ಮತ್ತು ಕಾಳುಮೆಣಸು ಕುರಿತು ಸುಮಾರು 2000 ಪ್ರೊಪೋಸಲ್ ಫಾರ್ಮುಗಳು ಭರ್ತಿಯಾಗುತ್ತಿದ್ದು ಕನಿಷ್ಟ ಒಂದು ತಿಂಗಳ ಅವಕಾಶವನ್ನು ಡಾಟಾ ಎಂಟ್ರೀಗೆ ನೀಡಿದಲ್ಲಿ ಕೆಲಸ ಸುಗಮವಾಗಬಹುದು ಎಂಬುವುದು ಸಹಕಾರ ಸಂಘಗಳ ಸಿಬ್ಬಂದಿಗಳ ಅಭಿಪ್ರಾಯ.