ಕರಿಕ್ಕಳ:ದನದ ಕೆಚ್ಚಲಿನಿಂದ ಕದ್ದು ಹಾಲು ಕರೆದ ಮಹಿಳೆ

0

ಮುಂಜಾನೆ ಬಂದು ಹಾಲು ಕರೆಯುತ್ತಿರುವ ದೃಶ್ಯ ಸಿ.ಸಿ ಕ್ಯಾಮಾರಾದಲ್ಲಿ ಸೆರೆ

ಕರಿಕ್ಕಳ ಮನೆಯೊಂದರ ಹಟ್ಟಿಯಲ್ಲಿದ್ದ ದನದ ಕೆಚ್ಚಲಿನಿಂದ ಮಹಿಳೆಯೊಬ್ಬರು ಹಾಲು ಕದ್ದ ಘಟನೆ ವರದಿಯಾಗಿದೆ.

ಕರಿಕ್ಕಳದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಹಲವು ವರ್ಷಗಳಿಂದ ಹಾಲು ಕರೆಯುವ ಕೆಲಸದಲ್ಲಿದ್ದು ಅವರೇ ಡೈರಿಗೆ ಕೊಂಡೊಯ್ಯುತಿದ್ದರೆನ್ನಲಾಗಿದೆ. ಇತ್ತೀಚೆಗೆ ಆ ಮಹಿಳೆ 4-5 ದಿವಸ ರಜೆ ಮಾಡಿದ್ದರು. ಈ ಸಂದರ್ಭ‌ ಮನೆಯವರು ಹಾಲು ಕರೆಯುವ ಕೆಲಸಕ್ಕೆ ಬೇರೊಂದು ವ್ಯಕ್ತಿಯನ್ನು ಕೆಲಸಕ್ಕೆ ನೇಮಿಸಿದ್ದರೆನ್ನಲಾಗಿದೆ. ಆದರೆ ಹೊಸದಾಗಿ ನೇಮಕಗೊಂಡ ಹಾಲು ಕರೆಯುವವನಿಗೆ ಮಾಮೂಲಿನಷ್ಟು ಹಾಲು ಸಿಗಲಿಲ್ಲ ಎನ್ನಲಾಗಿದೆ.

ಯಾಕೆ ಹೀಗಾಯಿತು ಎಂದು ಮಾಲಕರು‌ ಚಿಂತೆಗೊಳಗಾದರು. ಹೊಸದಾಗಿ ಸೇರಿದಾತ ದನದ ಕೆಚ್ಚಲು ಮಾಮೂಲಿನಂತೆ ಇರುವುದಿಲ್ಲ ಯಾರೋ ಹಾಲು ಕರೆಯುತ್ತಿದ್ದಾರೆಂದು ದನದ ಮಾಲಕರಲ್ಲಿ ದೂರಿಕೊಂಡಿದ್ದರು. ಇದನ್ನು ಆಧರಿಸಿ ಮನೆಯವರು ಹಟ್ಟಿಗೆ ಹಾಕಿದ್ದ ಸಿ.ಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಪ್ರಾತ: ಕಾಲ 4 – 5 ಗಂಟೆಗೆ ಮಹಿಳೆಯೊಬ್ಬರು ಬಂದು ದನದ ಕೆಚ್ಚಲಿನಿಂದ ಅರ್ಧ ಹಾಲು ಕರೆದು ಹೋಗುತ್ತಿರುವ ದೃಶ್ಯ ಸೆರೆಯಾಗಿರುವುದಾಗಿ ಕಂಡುಬಂತು. ಬಳಿಕ ಮಾಲಕರು ಹಾಲು ಕದಿಯುವ ವಿಚಾರದ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.