ಬೆಳ್ತಂಗಡಿ ಸೌಜನ್ಯ ಹತ್ಯೆ ಪ್ರಕರಣ : ನ್ಯಾಯಕ್ಕಾಗಿ ಆ.8 ರಂದು ಸುಳ್ಯದಲ್ಲಿ ಬೃಹತ್ ಸಭೆ

0

ನಿಂತಿಕಲ್ಲಿನಿಂದ ವಾಹನ ಜಾಥಾ – ತಿಮರೋಡಿ, ಸೌಜನ್ಯ ತಾಯಿ ಸಭೆಯಲ್ಲಿ ಭಾಗಿ

ಬೆಳ್ತಂಗಡಿ ಸೌಜನ್ಯ ಹತ್ಯೆಗೆ ನ್ಯಾಯಕ್ಕಾಗಿ ಆ.೮ರಂದು ಸುಳ್ಯದಲ್ಲಿ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯಕ್ಕಾಗಿ ಸೌಜನ್ಯ ಹೋರಾಟ ಸಮಿತಿಯ ಸಂಯೋಜಕ ಎನ್.ಟಿ.ವಸಂತ್ ಕುಮಾರ್ ಹೇಳಿದ್ದಾರೆ.


ಆ.೫ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸೌಜನ್ಯಳ ಹತ್ಯೆ ನಡೆದು ೧೧ ವರ್ಷ ಆದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ಆಕೆಯ ಹತ್ಯೆಯ ನೈಜ ಆರೋಪಿಯ ಬಂಧನ ಆಗಬೇಕುನ್ನುವುದು ನಮ್ಮ ಆಗ್ರಹ. ಆದ್ದರಿಂದ ಪ್ರಜ್ಞಾವಂತ ನಾಗರಿಕರು ಸೇರಿ ಹೋರಾಟಕ್ಕೆ ಮುಂದಾಗಿzವೆ. ಪಕ್ಷ, ಜಾತಿ, ಧರ್ಮ ಮರೆತು ಹೋರಾಟ ನಡೆಸಲಾಗುತ್ತಿದೆ. ಸುಳ್ಯದ ಗೌಡರ ಸಂಘ ಸೇರಿ ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಿವೆ ಎಂದು ಅವರು ಹೇಳಿದರು.


ಆ.೮ರಂದು ಹಕ್ಕೋತ್ತಾಯ ನಡೆಯಲಿದ್ದು ಬೆಳಗ್ಗೆ ೯ ಗಂಟೆಗೆ ನಿಂತಿಕಲ್‌ನಿಂದ ವಾಹನ ಜಾಥಾ ಆರಂಭವಾಗಲಿದೆ. ವಾಹನ ಜಾಥಾ ಸುಳ್ಯಕ್ಕೆ ತಲುಪಿ ಸುಳ್ಯದ ಜ್ಯೋತಿ ಸರ್ಕಲ್‌ನಿಂದ ಕಾಲ್ನಡಿಗೆ ಜಾಥ ಸುಳ್ಯದಲ್ಲಿ ಸಾಗಲಿದೆ. ಸುಮಾರು ೩ ಸಾವಿರಕ್ಕೂ ಅಧಿಕ ಮಂದಿ ಈ ಜಾಥಾದಲ್ಲಿ ಭಾಗವಹಿಸಲಿದ್ದಾರೆ. ಸುಳ್ಯದಲ್ಲಿ ನಡೆಯುವ ಸಭೆಯಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಮನೆಯವರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.


ಮಾಜಿ ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್ ಮಾತನಾಡಿ, ಸೌಜನ್ಯ ಹತ್ಯೆಗೆ ನ್ಯಾಯ ಸಿಗಬೇಕೆನ್ನುವುದು ನಮ್ಮ ಹೋರಾಟ. ಇದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕೆಂದು ವಿನಂತಿಸುತ್ತೇವೆ. ಒಬ್ಬ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ. ಆಕೆಯ ಸ್ಥಾನದಲ್ಲಿ ನಮ್ಮ ಮನೆ ಮಗಳು ಇದ್ದಾರೆ ಎಂಬ ಭಾವನೆ ನಮಗಿರಲಿ. ಆದ್ದರಿಂದ ಎಲ್ಲರೂ ಭಾಗವಹಿಸಿ ಆಕೆಯ ಮನೆಯವರಿ ನ್ಯಾಯ ಕೊಡಿಸೋಣ” ಎಂದು ಹೇಳಿದರು.


ಅಜಿತ್ ಐವರ್ನಾಡು ಮಾತನಾಡಿ, `ಎಲ್ಲರ ಮನಸಿನಲ್ಲಿಯೂ ಸೌಜನ್ಯಳಿಗೆ ನ್ಯಾಯ ಸಿಗಬೇಕೆನ್ನುವುದು ವಾಟ್ಸಾಪ್ ಗ್ರೂಪ್‌ನ ಮೂಲಕ ಗೊತ್ತಾಗುತ್ತಿದೆ. ಎದುರು ಬರುತ್ತಿಲ್ಲ ವಷ್ಟೆ. ನಾಯಕರೆನಿಸಿಕೊಂಡವರು ಹೋರಾಟಕ್ಕೆ ಮುಂದೆ ಬರಬೇಕು ಎಂದು ಅವರು ಹೇಳಿದರು. ‘ರಾಜಕೀಯ ನೇತೃತ್ವ, ಸಾಮಾಜಿಕವಾಗಿ ತೊಡಗಿಸಿಕೊಂಡಿರುವ ನಾಯಕರು ಹೋರಾಟಕ್ಕೆ ಮುಂದೆ ಬರಬೇಕು. ಕ್ಷೇತ್ರದ ಶಾಸಕರನ್ನೂ ನಾವು ಆಹ್ವಾನಿಸುತ್ತೇವೆ. ಹೋರಾಟಕ್ಕೆ ಬರುವಂತೆ ಕೇಳುತ್ತೇವೆ. ಈ ಹೋರಾಟ ಧರ್ಮಸ್ಥಳ ಕ್ಷೇತ್ರ, ಧರ್ಮಾಧಿಕಾರಿಗಳ ವಿರುದ್ದ ಅಲ್ಲವೇ ಅಲ್ಲ. ನಾವೂ ಕೂಡಾ ಕ್ಷೇತ್ರದ ಭಕ್ತರು. ಧರ್ಮಸ್ಥಳ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿzವೆ ಎಂದು ಪತ್ರಕರ್ತರ ಪ್ರಶ್ನೆಗೆ ಸಂಘಟಕರು ಉತ್ತರಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಸಂಚಾಲಕ ಹರೀಶ್ ಕುಮಾರ್ ಹುದೇರಿ, ದ.ಸ.ಸಮಿತಿಯ ವಿಶ್ವನಾಥ ಅಲೆಕ್ಕಾಡಿ, ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ಕಾರ್ಯದರ್ಶಿ ಭರತ್ ಕುಮಾರ್, ಜಯಲಕ್ಷ್ಮೀ ಬಾಳಿಲ ಇದ್ದರು.