ಕಲ್ಚಾರ್ – ಕಂದಡ್ಕ ರಸ್ತೆ ಕಳಪೆ : ಉಬರಡ್ಕ‌ ಗ್ರಾಮ ಸಭೆಯಲ್ಲಿ ಪ್ರಸ್ತಾಪ

0

ಇಲಾಖಾಧಿಕಾರಿಗಳ ಗೈರು : ಗ್ರಾಮಸ್ಥರ ಅಸಮಾಧಾನ

ಉಬರಡ್ಕ‌ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಚಿತ್ರಕುಮಾರಿಯವರ ಅಧ್ಯಕ್ಷತೆಯಲ್ಲಿ ಆ.16 ರಂದು ಪಂಚಾಯತ್ ಸಭಾಂಗಣದಲ್ಲಿ ‌ನಡೆಯಿತು. ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಮೇಶ್ ನೋಡೆಲ್ ಅಧಿಕಾರಿಯಾಗಿದ್ದರು.

ಇಲಾಖಾಧಿಕಾರಿಗಳ ಗೈರು : ಸಭೆ ಆರಂಭವಾಗುತ್ತಿದ್ದಂತೆ ಗ್ರಾಮ ಪಂಚಾಯತ್ ‌ಮಾಜಿ ಅಧ್ಯಕ್ಷ ಪಿ.ಎಸ್.ಗಂಗಾಧರರು ಜಿ.ಪಂ., ಪಿಡಬ್ಲ್ಯೂಡಿ ಇಂಜಿನಿಯರ್ ಇಲಾಖೆಯವರು ಗೈರು ಹಾಜರಾತಿಗೆ ಅಸಮಾಧಾನಗೊಂಡರು. ಪಿಡಿಒ ವಿದ್ಯಾಧರ್ ಇಂಜಿನಿಯರ್ ರಿಗೆ ಫೋನ್ ಮಾಡಿ, ಅವರಿಗೆ ಮಂಗಳೂರಿನಲ್ಲಿ‌ ಮೀಟಿಂಗ್ ಇರುವ‌ ಬಗ್ಗೆ‌ ಮಾಹಿತಿ ನೀಡಿದರು. ಯು.ಎಸ್.ವೆಂಕಟ್ರಾಮ್ ಭಟ್‌ರು‌ ಇಂಜಿನಿಯರ್ ವಿಭಾಗಕ್ಕೆ‌ ಮೂರು‌ ಗ್ರಾಮ ಸಭೆಯಲ್ಲಿಯೂ ಮನವಿ ನೀಡಿದ್ದೇನೆ.‌

ಇದು ವರೆಗೆ ಉತ್ತರ ಬಂದಿಲ್ಲ ಎಂದು ಹೇಳಿದರು. ಇಲಾಖಾಧಿಕಾರಿಗಳನ್ನು‌ ಬರುವಂತೆ ಪಂಚಾಯತ್ ಮಾಡಬೇಕು ಎಂದು ಸುರೇಶ್ ಅಮೈ ಸಲಹೆ ನೀಡಿದರು. ಇದೇ ವಿಚಾರದಲ್ಲಿ ಕೆಲ ಕಾಲ ಚರ್ಚೆ ನಡೆದು‌ ಸಭೆ ಮುಂದುವರಿಯಿತು.

ರಸ್ತೆ ಕಳಪೆ : ಉಬರಡ್ಕ ಗ್ರಾಮದ ಕಲ್ಚಾರ್ ನಿಂದ ಕಂದಡ್ಕ ವರೆಗೆ 3 ತಿಂಗಳ ಹಿಂದೆ ರಸ್ತೆ ಅಭಿವೃದ್ಧಿ ‌ಮಾಡಲಾಗಿತ್ತು. ಇದೀಗ ಕಲ್ಚಾರ್ ನಲ್ಲಿ ರಸ್ತೆ ಕಾಮಗಾರಿ ಎದ್ದಿದೆ.‌ ಅದು ಕಳಪೆಯಾಗಿದೆ ಎಂದು ರಾಘವ‌ ನಾಯ್ಕ್ ಕಕ್ಕೆಬೆಟ್ಟು‌ ಹೇಳಿದರು.

ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲರು ಕೂಡಾ ಪೂರಕವಾಗಿ ಮಾತನಾಡಿದರು.‌ಈ‌ಕುರಿತು ಇಲಾಖೆಗೆ ಬರೆಯಲು ನಿರ್ಧರಿಸಲಾಯಿತು.ಉರುಂಡೆ ಎಂಬಲ್ಲಿ ಮಾಡಿದ ಕಿಂಡಿ‌ ಅಣೆಕಟ್ಟು ಅವೈಜ್ಞಾನಿಕ ವಾಗಿದೆ.‌ಅದರಿಂದ ಅಪಘಾತಗಳು ಆಗುತ್ತಿದೆ.‌ ಆ ಕೆಲಸ ಪೂರ್ಣಗೊಳಿಸದಿದ್ದೆ ಅದನ್ನೆ ಅಲ್ಲಿಂದ ತೆರವು ಮಾಡಿ ಎಂದು ಜಯಪ್ರಕಾಶ್ ಉರುಂಡೆ ಹೇಳಿದರು. ಅದು ಕಿಂಡಿ‌ ಅಣೆಕಟ್ಟು ಅಲ್ಲ.‌ ಸಂಪರ್ಕ ‌ರಸ್ತೆಗೆ‌ ಪೂರಕವಾದ ವ್ಯವಸ್ಥೆ. ‌ಅದು ಪೂರ್ತಿ ಕೆಲಸ ಆಗಿಲ್ಲ. ಅದನ್ನು ಆದ್ಯತೆಯಲ್ಲಿ ಮಾಡಬೇಕು ಎಂದು ಸುರೇಶ್ ಅಮೈ‌ ಹೇಳಿದರು. ಈ ಕುರಿತು ಇಂಜಿನಿಯರ್ ಇಲಾಖೆಗೆ ನಿರ್ಣಯ ಕೈಗೊಳ್ಳಲಾಯಿತು.

ಸೇತುವೆ ವಾಪಸ್ ಹೋಗಿದೆ : ಪಾಲಡ್ಕದ ಸಂಕದ ವಿಚಾರದಲ್ಲಿ ‌ಪ್ರತೀ ಗ್ರಾಮ ಸಭೆಯಲ್ಲಿ ಮನವಿ ಮಾಡುತ್ತಿದ್ದೇವೆ. ಏನಾದರೂ ಪ್ರೊಗ್ರೆಸ್ ಆಗಿದಾ ? ಎಂದು ರೋಹನ್ ಪೀಟರ್ ‌ಪ್ರಶ್ನಿಸಿದರು. ಅವರಿಗೆ ಪೂರಕವಾಗಿ ಮಾತನಾಡಿದ ಪಿ.ಎಸ್.ಗಂಗಾಧರ್ ನಮ್ಮ ಗ್ರಾಮದಲ್ಲಿ‌ ನದಿ ಹರಿಯುತ್ತಿದೆ.‌ ಅಮೈಮಡಿಯಾರು ಮತ್ತು ಪಾಲಡ್ಕದಲ್ಲಿ ಕಾಲು ಸಂಕ ಇದೆ. ಅದಕ್ಕೆ ಸರ್ವ ಋತು ಸೇತುವೆ ಆಗಬೇಕೆನ್ನುವುದು ನಮ್ಮ ಬೇಡಿಕೆ.‌ 2016-17 ರಲ್ಲಿ ದೊಡ್ಡ ಸೇತುವೆ ಇಲ್ಲಿಗೆ ಮಂಜೂರು ಗೊಂಡಿತ್ತು.‌ಬಳಿಕ‌ ಅದನ್ನು ಕಡಬಕ್ಕೆ ಶಿಫ್ಟ್ ‌ಮಾಡಲಾಗಿದೆ ಎಂದು ಹೇಳಿದರು.

ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆ ನಿರ್ಧರಿಸಿತು. ಕಲ್ಲುಪಣೆ – ಕಾಡುತೋಟ ರಸ್ತೆ ಅಭಿವೃದ್ಧಿ ಆಗಬೇಕೆಂದು ಪಿ.ಎಸ್.ಗಂಗಾಧರ್ ಹೇಳಿದರು. ಮರಳು ತೆಗೆಯಲು ಬಿಟ್ಟಿಲ್ಲ : ಪಿ.ಎಸ್.ಗಂಗಾಧರ್ ರು‌ ಮಾತನಾಡಿ 181/1 ಸ.ನಂಬರ್ ನಲ್ಲಿ ಮರಳು ತೆಗೆಯಲು ನಿಗದಿ‌ ಮಾಡಲಾಗಿತ್ತು. ಮರಳು ತೆಗೆಯಲು ಬಂದ ವ್ಯಕ್ತಿ ಗೆ ಯಾಕೆ ಅವಕಾಶ ‌ನೀಡಿಲ್ಲ. ಇದರಿಂದ ಪಂಚಾಯತ್ ಗೆ ನಷ್ಟವಾಗಿಲ್ಲವೇ ? ಎಂದು ಪ್ರಶ್ನಿಸಿದರು.

“ಒಮ್ಮೆ ಬಂದಿದ್ದರು.‌ಮತ್ತೆ ಅವರು‌ ಬರಲಿಲ್ಲ. ಕಾಲ್ ಗೂ ಸಿಕ್ಕಿಲ್ಲ ಎಂದು ಪಿಡಿಒ‌ ಹೇಳಿದರು. ಆಗ‌ ಹರೀಶ್ ರೈ ಉಬರಡ್ಕರು ಜಾಗ‌ ನಿಗದಿಯಾಗಿದೆ. ಗಣಿ ಇಲಾಖೆಯಿಂದ ಪಿಡಿಒ ಅನುಮತಿ ಪಡೆದು ಮುಂದುವರಿಯಬೇಕು. ನೀವು ಅದನ್ನು ಮಾಡಿಲ್ಲ ಎಂದು ಹೇಳಿದರು. ಈ ಕುರಿತು ಸುರೇಶ್ ‌ಅಮೈಯವರು ಕೂಡಾ ಮಾತನಾಡಿದರು. ಈ‌ಬಗ್ಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಪಂಚಾಯತ್ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ ಹೇಳಿದರು.ಗ್ರಾಮದ ರಸ್ತೆ ‌ಬದಿಯಲ್ಲಿ ಕಸಗಳು, ಮದ್ಯದ ಬಾಟಲಿಗಳು ಇರುತ್ತವೆ.‌ಅದನ್ನು ಎಸೆಯುವುದನ್ನು‌ ತಡೆಯಲು ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಸಂತೋಷ್ ಸೂಂತೋಡು ಸಲಹೆ ನೀಡಿದರು. ಅನುದಾನದ ಕೊರತೆಯ ಪ್ರಸ್ತಾಪವಾದಾಗ, ಸಿಸಿ ಕ್ಯಾಮರಾ ಅಳವಡಿಸಿ.‌

ಕಸ ಎಸೆದವರು ಪತ್ತೆಯಾದಾಗ ದಂಡ ಹಾಕಿ ಅದನ್ನು ಸರಿದೂಗಿಸಬಹುದು ಎಂದು ಸಂತೋಷ್ ಸಲಹೆ ನೀಡಿದರು.ಪಂಚಾಯತ್ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ, ನಿಯೋಜಿತ ಅಧ್ಯಕ್ಷೆ ಪೂರ್ಣಿಮಾ ಸೂತೋಡು, ಸದಸ್ಯರುಗಳಾದ ಹರೀಶ್ ರೈ ಉಬರಡ್ಕ, ಅನಿಲ್ ಬಳ್ಳಡ್ಕ, ಸಂದೀಪ್ ಕುತ್ತಮೊಟ್ಟೆ, ಮಮತಾ ಕುದ್ಪಾಜೆ, ಭವಾನಿ ಎಂ.ಪಿ, ವಸಂತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿದ್ಯಾಧರ್ ಕೆ.ಎನ್. ಇದ್ದರು.ಪಂಚಾಯತ್ ಸಿಬ್ಬಂದಿ ಪ್ರವೀಣ್ ವರದಿ ವಾಚಿಸಿದರು.