ಕಾಯರ್ತೋಡಿ: ಶ್ರೀ ಮಹಾವಿಷ್ಣು ದೇವಾಲಯದಲ್ಲಿ ನಾಗಬ್ರಹ್ಮ ಸಹಪರಿವಾರ ಪ್ರತಿಷ್ಠೆ

0

ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಳಕ್ಕೆ ಸಂಬಂಧಿಸಿದ ಶ್ರೀ ನಾಗದೇವರ ಮೂಲಸ್ಥಾನದಲ್ಲಿ ಬ್ರಹ್ಮಶ್ರೀ ವೇ.ಮೂ. ದೇಲಂಪಾಡಿ ಗಣೇಶ್ ತಂತ್ರಿಗಳ ಮಾರ್ಗದರ್ಶನದಲ್ಲಿ ನಾಗಬ್ರಹ್ಮ ಸಹಪರಿವಾರ ಪ್ರತಿಷ್ಠೆಯು ಆ.20ರಂದು ಜರುಗಿತು.

ದೇವಾಲಯದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ದೇವಾಲಯದ ಸಮೀಪ ಇರುವ ನಾಗನ ಕಟ್ಟೆಯಲ್ಲಿ ಈ ಹಿಂದೆ ಪೂಜೆ ನಡೆಯುತ್ತಿದ್ದು, ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ನಾಗನ ಮೂಲದಲ್ಲಿ ನಾಗನಕಟ್ಟೆ ನಿರ್ಮಿಸಲಾಗಿದ್ದು, ಆ.19ರಂದು ಸಂಜೆ ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯವರಣ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ನೂತನ ಬಿಂಬ ಜಲಧಿವಾಸ, ವಾಸ್ತುಬಲಿ ಜರುಗಿತು.


ಆ.20ರಂದು ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆದು, ಪೂರ್ವಾಹ್ನ ತುಲಾ ಲಗ್ನದ ಸುಮೂಹೂರ್ತದಲ್ಲಿ ನಾಗಬ್ರಹ್ಮ ಸಹಪರಿವಾರದ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನದಾನ ಜರುಗಿತು.


ಈ ಸಂದರ್ಭದಲ್ಲಿ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರಧಾನ ಅರ್ಚಕ ನೀಲಕಂಠ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್, ಸದಸ್ಯರುಗಳಾದ ಡಿ.ಎಸ್. ಗಿರೀಶ್, ಕೃಷ್ಣ ಬೆಟ್ಟ, ಎನ್.ಆನಂದ, ನಾರಾಯಣ ಕಾಯರ್ತೋಡಿ, ಬಿ.ಕೆ. ಪರಮೇಶ್ವರ, ಶ್ರೀಮತಿ ನಮಿತ ಎ.ಕೆ., ಶ್ರೀಮತಿ ಅನಂತೇಶ್ವರಿ ಎಂ. ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.