ತಾಲೂಕಿಗೊಂದು ಗೋಶಾಲೆ ನಿರ್ಮಿಸುವ ಸರಕಾರದ ನಿರ್ಧಾರದನ್ವಯ ಸುಳ್ಯದ ಕೊಡಿಯಾಲಬೈಲಿನಲ್ಲಿರುವ ಪಶು ಸಂಗೋಪನಾ ಇಲಾಖೆಯ ಸ್ಥಳದಲ್ಲಿ ಗೋಶಾಲೆ ನಿರ್ಮಾಣಗೊಳ್ಳುತ್ತಿದ್ದು ಅದಕ್ಕೆ ಪಯಸ್ವಿನಿ ಗಾಂಧಿವನ ಸರ್ಕಾರಿ ಗೋಶಾಲೆ ಎಂದು ಅಧಿಕೃತ ನಾಮಕರಣ ಮಾಡಲಾಗಿದೆ.
ಪಶುಸಂಗೋಪನಾ ಇಲಾಖೆಯ ಈ ೮ ಎಕ್ರೆ ಪ್ರದೇಶದಲ್ಲಿ ಇಲಾಖೆ ಮತ್ತು ಸುಳ್ಯದ ಗಾಂಧಿ ಚಿಂತನ ವೇದಿಕೆ ಸೇರಿ ಕಳೆದೈದು ವರ್ಷಗಳಿಂದ ಸಾವಿರಾರು ಗಿಡಗಳನ್ನು ನೆಟ್ಟು ಗಾಂಧಿ ವನ
ನಿರ್ಮಿಸಿದ್ದವು. ಕಳೆದ ವರ್ಷ ರಾಜ್ಯ ಸರಕಾರವು ಈ ಪ್ರದೇಶದಲ್ಲಿ ಗೋಶಾಲೆ ನಿರ್ಮಿಸಲು ಯೋಚಿಸಿ ಕಟ್ಟಡಕ್ಕಾಗಿ ೫೦ ಲಕ್ಷ ರೂ. ಮಂಜೂರು ಮಾಡಿತ್ತು. ಈ ಕಟ್ಟಡ ಕಾಮಗಾರಿ ಶೇ.೭೫ ರಷ್ಟು ಪೂರ್ಣಗೊಂಡಿದೆ. ಇನ್ನು ಉಳಿದಿರುವ ಕಾಮಗಾರಿ ಆಗಬೇಕಾಗಿದೆ. ಈಗ ಗೋಶಾಲೆಗೆ ಪಯಸ್ವಿನಿ ಗಾಂಧಿವನ ಸರ್ಕಾರಿ ಗೋಶಾಲೆ
ಎಂಬ ಹೆಸರು ಅಧಿಕೃತಗೊಂಡಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಗೋಶಾಲೆ ನಡೆಸಲು ಸರ್ಕಾರ ನಿರ್ಧರಿಸಿದೆ. ಗೋಶಾಲೆ ನಡೆಸಲು ಆಸಕ್ತಿ ಇರುವ ನೋಂದಾಯಿತ ಸಂಸ್ಥೆಯವರು ಮಾಹಿತಿಗಾಗಿ ತಮ್ಮನ್ನು ಸಂಪರ್ಕಿಸಬಹುದೆಂದು ಸುಳ್ಯ ಪಶು ಸಂಗೋಪನಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಡಾ| ನಿತಿನ್ ಪ್ರಭು ತಿಳಿಸಿದ್ದಾರೆ.