ಸೋಣಂಗೇರಿ – ಬೇಂಗಮಲೆ -ಚೊಕ್ಕಾಡಿ ರಸ್ತೆ ಕಾಮಗಾರಿ ಕಳಪೆ ಆರೋಪ : ಊರವರಿಂದ ಆಕ್ರೋಶ

0

ಸ್ಥಳಕ್ಕಾಗಮಿಸಿದ ಇಂಜಿನಿಯರ್ – ಗುತ್ತಿಗೆದಾರರಿಗೆ ಸೂಚನೆ

ರಸ್ತೆ ಅಗಲ ಮಾಡಲು ಒತ್ತಾಯ : ಜಾಗದ ಮಾಲಕರೊಂದಿಗೆ ಮಾತನಾಡಿದ ನಾಯಕರು

ಸೋಣಂಗೇರಿ – ಬೇಂಗಮಲೆ – ಚೊಕ್ಕಾಡಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಈ ಕೆಲಸ ಕಳಪೆಯಾಗಿದೆ ಎಂದು ಆರೋಪಿಸಿರುವ ಊರವರು ಆ.೨೯ರಂದು ಬೇಂಗಮಲೆಯಲ್ಲಿ ಸೇರಿ ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ, ಸ್ಥಳದಲ್ಲಿ ಪ್ರತಿಭಟನೆಯ ವಾತಾವರಣ ನಿರ್ಮಾಣವಾಗಿ ವಿಷಯ ತಿಳಿದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಆಗಮಿಸಿ ಸ್ಥಳೀಯರ ಅಹವಾಲು ಆಲಿಸಿ, ಗುತ್ತಿಗೆದಾರರಿಗೆ ಸೂಚನೆ ನೀಡಿದ ಘಟನೆ ನಡೆದಿದೆ.

ಸೋಣಂಗೇರಿ – ಬೇಂಗಮಲೆ – ಚೊಕ್ಕಾಡಿ ರಸ್ತೆ ಕಾಮಗಾರಿ ಶಾಸಕರಾಗಿದ್ದ ಎಸ್.ಅಂಗಾರರು ರೂ.೨ ಕೋಟಿ ಅನುದಾನ ತರಿಸಿದ್ದರು. ಇದೀಗ ಆ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಯಾಗುತ್ತಿದೆ. ಸೋಣಂಗೇರಿಯಿಂದ ಕೆಲಸ ಆರಂಭಗೊಂಡು ಇದೀಗ ಬೇಂಗಮಲೆಯಲ್ಲಿ ರಸ್ತೆ ಅಗಲೀಕರಣ ನಡೆಯುತ್ತಿದೆ. ಆದರೆ ಕೆಲಸ ವಹಿಸಿಕೊಂಡಿರುವವರು ರಸ್ತೆಯ ಬದಿಯಲ್ಲಿರುವ ಮರ ತೆರವು ಮಾಡುತ್ತಿಲ್ಲ. ರಸ್ತೆಯನ್ನು ಅಗಲಗೊಳಿಸುತ್ತಿಲ್ಲ, ಕೆಲಸ ವೇಗವಾಗಿ ಮಾಡುತ್ತಿಲ್ಲ, ಒಂದೇ ಜೆಸಿಬಿಯಲ್ಲಿ ಅಗೆಯುತ್ತಿದ್ದಾರೆ ಹಾಗೂ ದೊಡ್ಡ ಜಲ್ಲಿ ಹಾಕಬೇಕಾದಲ್ಲಿ ಸಣ್ಣ ಜಲ್ಲಿ ಹಾಕಿ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿರುವ ರಸ್ತೆ ಫಲಾನುಭವಿಗಳಾದ ಗ್ರಾ.ಪಂ. ಸದಸ್ಯ ರಾಧಾಕೃಷ್ಣ ಕೊರತ್ಯಡ್ಕ,

ಚೇತನ್ ಚಿಲ್ಪಾರು, ಪವನ್ ಮುಂಡ್ರಾಜೆ, ಮಾಧವ ಮಂಗಲ್ಪಾಡಿ, ಕುಮಾರ ಮಂಗಲ್ಪಾಡಿ, ಹರೀಶ್ ಕೊರತ್ಯಡ್ಕ, ಯುವರಾಜ ಕೊರತ್ಯಡ್ಕ, ದೇವಿಪ್ರಸಾದ್ ಕೊಪ್ಪತ್ತಡ್ಕ, ಗೀತೇಂದ್ರ ಕೊಪ್ಪತಡ್ಕ, ಮಹೇಶ್ ಬೇಂಗಮಲೆ, ಅನಂತ ಖಂಡಿಗೆಮೂಲೆ, ಚಂದ್ರಶೇಖರ ಮುಂಡ್ರಾಜೆ ಮೊದಲಾದ ಸುಮಾರು ೨೦ಕ್ಕೂ ಅಧಿಕ ಮಂದಿ ರಸ್ತೆ ಕೆಲಸ ಆಗುವಲ್ಲಿ ಸೇರಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಈ ವೇಳೆ ಜಿ.ಪಂ. ಮಾಜಿ ಸದಸ್ಯರುಗಳಾದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರೂ ಆಗಿರುವ ಹರೀಶ್ ಕಂಜಿಪಿಲಿ ಹಾಗೂ ಜಿ.ಪಂ. ಮಾಜಿ ಸದಸ್ಯ ಎಸ್.ಎನ್. ಮನ್ಮಥರಿಗೂ ವಿಷಯ ತಿಳಿಸಲಾಯಿತು.

ಅವರು ಸ್ಥಳಕ್ಕೆ ಬಂದರು. ಬೇಂಗಮಲೆಯಲ್ಲಿ ಜನ ಸೇರಿರುವ ವಿಷಯ ತಿಳಿದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪರಮೇಶ್ವರರು ಸ್ಥಳಕ್ಕೆ ಬಂದರು. ಸ್ಥಳದಲ್ಲಿ ಸೇರಿದ್ದ ಜನರು ರಸ್ತೆ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ ಎಂಬ ಅಹವಾಲು ಸಲ್ಲಿಸಿದರಲ್ಲದೆ, ಕೆಲಸಗಾರರ ಮೇಲೆ ಆಕ್ರೋಶ ವ್ಯಕ್ತ ಪಡಿಸಿದರು.
ರಸ್ತೆ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ಪರವಾಗಿ ಸುಶಾಂತ್‌ರವರು ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿದೆ. ಇಲ್ಲಿ ರಸ್ತೆ ಬದಿ ಮರಗಳಿವೆ. ವಿದ್ಯುತ್ ಕಂಬಗಳು ರಸ್ತೆಯಲ್ಲಿವೆ. ಅದೆಲ್ಲ ತೆರವು ಮಾಡಿ ಕೊಟ್ಟರೆ ಕೆಲಸವೂ ಬೇಗ ಮಾಡಬಹುದು ಎಂದು ತಮ್ಮ ಬೇಡಿಕೆ ಮುಂದಿಟ್ಟರು.

ಈ ವೇಳೆ ಊರವರು ಸಣ್ಣ ಜಲ್ಲಿ ಹಾಕಿದ್ದು ಏಕೆ ? ಎಷ್ಟಿಮೇಟ್ ಹಾಗೆ ಇರೋದಾ? ಎಂದು ಪ್ರಶ್ನಿಸಿದಾಗ, ಇಂಜಿನಿಯರ್ ಪರಮೇಶ್ವರ್‌ರವರು, ಜಲ್ಲಿ ಹಾಕಿದ ಸ್ಥಳವನ್ನು ಪರಿಶೀಲನೆ ನಡೆಸಿದರು. ಈ ಜಲ್ಲಿ ತೆಗೆದು ದೊಡ್ಡ ಜಲ್ಲಿಯನ್ನು ಹಾಕಿ ಕೆಲಸ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಹರೀಶ್ ಕಂಜಿಪಿಲಿ ಹಾಗೂ ಎಸ್.ಎನ್. ಮನ್ಮಥರು ರಸ್ತೆ ಕೆಲಸ ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರೆಂದೂ ತಿಳಿದು ಬಂದಿದೆ.

ಕೆಲವು ಕಡೆ ರಸ್ತೆ ಅಗಲೀಕರಣಕ್ಕೆ ಜಾಗದ ಸಮಸ್ಯೆ ಇದೆ. ಅದನ್ನು ಸ್ಥಳೀಯರೊಂದಿಗೆ ಮಾತನಾಡಿ ಕೊಡಬೇಕೆಂದು ಗುತ್ತಿಗೆದಾರರು ಹೇಳಿದಾಗ, ಎಸ್.ಎನ್.ಮನ್ಮಥರು ಒಪ್ಪಿ ಕೆಲವು ಮನೆಗೆ ತೆರಳಿ ರಸ್ತೆ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೇಳಿಕೊಂಡರೆಂದು ತಿಳಿದು ಬಂದಿದೆ.
ರಸ್ತೆ ಬದಿಯ ಮರವನ್ನು ತೆರವು ಮಾಡಲು ಅರಣ್ಯ ಇಲಾಖೆಯವರೊಂದಿಗೆ ಚರ್ಚಿಸುವುದಾಗಿ ಇಂಜಿನಿಯರ್ ಪರಮೇಶ್ವರ್ ತಿಳಿಸಿದರೆಂದು ತಿಳಿದು ಬಂದಿದೆ.