ಸುಳ್ಯದ ಹಿರಿಯ ವೈದ್ಯರಾದ ಡಾ.ಸಿ.ಎಸ್.ಭಟ್ ಆ.29 ರಂದು ಬೆಂಗಳೂರಿನಲ್ಲಿರುವ ಮಗಳ ಮನೆಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ವಯೋನಿಶ್ಶಕ್ತಿಯ ಕಾರಣದಿಂದಾಗಿ ವಿಶ್ರಾಂತಿ ಪಡೆಯಲೆಂದು ಕೆಲವರ್ಷಗಳಿಂದ ಡಾ.ಸಿ.ಎಸ್.ಭಟ್ ರವರು ಪತ್ನೀ ಸಮೇತರಾಗಿ ಬೆಂಗಳೂರಿನಲ್ಲಿರುವ ಮಗನ ಮನೆಯಲ್ಲಿ ಮತ್ತು ಮಗಳ ಮನೆಯಲ್ಲಿ ಇರುತ್ತಿದ್ದರು. ಮರೆವಿನ ಕಾಯಿಲೆ ಕೂಡ ಅವರನ್ನು ಬಾಧಿಸುತ್ತಿತ್ತು.
ಆ.29 ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದ ಅವರ ಪಾರ್ಥಿವ ಶರೀರವನ್ನು ಸುಳ್ಯ ಅಜ್ಜಾವರದ ಮುಳ್ಯದಲ್ಲಿರುವ ಎರಡನೇ ಮಗನ ಮನೆಗೆ ತಂದು ರಾತ್ರಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಮೃತರ ಪತ್ನಿ ಪಾರ್ವತಿಯವರು, ಹಿರಿಯ ವಿದ್ವಾಂಸರಾಗಿದ್ದ ದಿ.ಪ್ರೊ.ಮರಿಯಪ್ಪ ಭಟ್ ರವರ ಪುತ್ರಿ. ಡಾ.ಸಿ.ಎಸ್.ಭಟ್ (ಸತ್ಯನಾರಾಯಣ ಭಟ್) ರವರ ಹಿರಿಯ ಪುತ್ರ ಡಾ.ರಾಮಚಂದ್ರ ಭಟ್ ರವರು ಬೆಂಗಳೂರಿನ ಮಾರುತಿ ಡೆಂಟಲ್ ಕಾಲೇಜ್ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದು, ಈಗ ದಂತವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡನೆರ ಪುತ್ರ ಮರಿಯಪ್ಪ ಭಟ್ ರವರು ಕಾಂತಮಂಗಲ ಮುಳ್ಯದಲ್ಲಿ ನೆಲೆಸಿ ಕೃಷಿಕರಾಗಿದ್ದಾರೆ.
ಕಿರಿಯವರಾದ ಪುತ್ರಿ ಶ್ರೀಮತಿ ಉಷಾರವರು ಚಾರ್ಟರ್ಡ್ ಅಕೌಂಟೆನ್ಸಿ ಮಾಡಿದ್ದು, ಅವರ ಪತಿ ಕೂಡ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ.
ಡಾ.ಸಿ.ಎಸ್.ಭಟ್ ರವರು, ಪತ್ನಿ , ಇಬ್ಬರು ಪುತ್ರರು, ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.