ಇಂದಿರಾ ಕ್ಯಾಂಟಿನ್, ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ
ಸುಳ್ಯದ ಇಂದಿರಾ ಕ್ಯಾಂಟಿನ್, ಸುಳ್ಯದ ಬಿಸಿಎಂ ಹಾಸ್ಟೆಲ್, ಸಮಾಜಕಲ್ಯಾಣ ಇಲಾಖೆಯಿಂದ ನಡೆಸಲ್ಪಡುವ ಪ.ಜಾತಿ, ಪಂಗಡ ವಿದ್ಯಾರ್ಥಿ ನಿಲಯಗಳಿಗೆ ಸುಳ್ಯ ತಾಲೂಕು ಪಂಚಾಯತ್ ಆಡಳಿತಾಧಿಕಾರಿ, ಮಂಗಳೂರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಅಭಿಷೇಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಂದಿರಾ ಕ್ಯಾಂಟಿನ್ ಭೇಟಿ ನೀಡಿ ಅಲ್ಲಿ ಊಟ ಮಾಡಿಕೊಂಡಿದ್ದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಮಾತನಾಡಿದರು. ಆಹಾರದ ಗುಣಮಟ್ಟದ ಕುರಿತು ವಿಚಾರಿಸಿದರು. ಅಲ್ಲಿಂದ ಬಳಿಕ ತಾಲೂಕು ಕಚೇರಿಯ ಪಕ್ಕದ ಬಿಸಿಎಂ ಹಾಗೂ ಪ.ಜಾತಿ ಪಂಗಡದ ಹಾಸ್ಟೆಲ್ ಗೆ ಭೇಟಿನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿನಿಯರಲ್ಲಿ ಆಹಾರ ಗುಣಮಟ್ಟದ ಕುರಿತು ವಿಚಾರಿಸಿದರಲ್ಲದೆ ಸಮಸ್ಯೆಗಳಿದ್ದರೆ ತಿಳಿಸುವಂತೆ ಹೇಳಿದರು.
ಕುರುಂಜಿಗುಡ್ಡೆ ಪಾರ್ಕ್ :
ಸುಳ್ಯ ಕುರುಂಜಿಗುಡ್ಡೆ ಪಾರ್ಕ್ ನ.ಪಂ. ನಲ್ಲಿ ಸ್ವಚ್ಚತೆ ಇಲ್ಲದಿರುವ, ಸೌಂದರ್ಯ ವರ್ಧಕ ಗಿಡಗಳ ಮೈಂಟೆನೆನ್ಸ್, ಆಟದ ವಸ್ತುಗಳ ಮೈಂಟೆನೆನ್ಸ್ ಇಲ್ಲದಿರುವ ಕುರಿತು ಸ್ಥಳದಲ್ಲಿದ್ದ ಪತ್ರಕರ್ತರು ಯೋಜನಾ ನಿರ್ದೇಶಕರ ಗಮನಕ್ಕೆ ತಂದರಲ್ಲದೆ, ಭೇಟಿ ನೀಡುವಂತೆ ಕೇಳಿಕೊಂಡರು. ಈ ಕುರಿತು ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ರಲ್ಲಿ ವಿಚಾರಿಸಿದಾಗ ಪಾರ್ಕ್ ನ್ನು ಬ್ಯಾಡ್ಮಿಂಟನ್ ಅಸೋಸಿಯೇಷನ್ ನವರು ಮೈಂಟೆನೆನ್ಸ್ ಗೆ ನೀಡಲಾಗಿದೆ ಎಂದು ಹೇಳಿದರು. ಈ ಕುರಿತು ವಾರದೊಳಗೆ ನನಗೆ ವರದಿ ನೀಡಬೇಕು ಎಂದು ಯೋಜನಾ ನಿರ್ದೆಶಕರು ಸೂಚನೆ ನೀಡಿದರಲ್ಲದೆ, ಮುಂದಿನ ಬಾರಿ ಸುಳ್ಯಕ್ಕೆ ಬಂದಾಗ ನಾನು ಪಾರ್ಕ್ ಗೆ ಭೇಟಿನೀಡಿ ಪರಿಶೀಲನೆ ನಡೆಸುವುದಾಗಿ ಪತ್ರಕರ್ತರಿಗೆ ತಿಳಿಸಿದರು. ಅವರು ಮಂಗಳೂರಿಗೆ ತೆರಳಿದರು.