ಬಿಜೆಪಿಯಲ್ಲಿ ಬೊಳ್ಳೂರು ತಟಸ್ಥ…?

0

ರೈತ ಮೋರ್ಚಾ ಪ್ರತಿಭಟನೆಗೆ ಗೈರು

ಕಡೆಗಣನೆಯ ಅಸಮಾಧಾನ- ಕಾಂಗ್ರೆಸ್ ಸೇರುವ ವದಂತಿ

ಸುಳ್ಯ ಬಿಜೆಪಿ ಮುಖಂಡ, ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿರುವ ಮಾಜಿ ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಬೊಳ್ಳೂರು ಪಕ್ಷದಲ್ಲಿ ತನ್ನನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನದಿಂದ ಪಕ್ಷದ ಚಟುವಟಿಕೆಯಲ್ಲಿ ಭಾಗಿಯಾಗದೆ ತಟಸ್ಥರಾಗಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ. ಸೆ.೧೧ರಂದು ರೈತ ಮೋರ್ಚಾ ನೇತೃತ್ವದಲ್ಲಿ ಸುಳ್ಯದಲ್ಲಿ ನಡೆದ ಕಾಂಗ್ರೆಸ್ ವಿರುದ್ಧದ ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರೂ ಆಗಿರುವ ಬೊಳ್ಳೂರು ಭಾಗವಹಿಸದಿರುವುದು ಈ ರೀತಿಯ ಚರ್ಚೆಗೆ ಕಾರಣವಾಗಿದೆ.


ತಾಲೂಕು ಪಂಚಾಯತ್ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದ್ದ ರಾಧಾಕೃಷ್ಣ ಬೊಳ್ಳೂರು, ಪಕ್ಷದ ಚಟುವಟಿಕೆಗಳಲ್ಲೂ ಸಕ್ರಿಯರಾಗಿರುತ್ತಿದ್ದರು. ಆದರೆ ಸೆ.೧೧ರ ಪ್ರತಿಭಟನೆಯಲ್ಲೂ ಇರಲಿಲ್ಲ. ಆ ಬಗ್ಗೆ ಮಾಹಿತಿ ನೀಡಲು ಕರೆದ ಪತ್ರಿಕಾಗೋಷ್ಠಿಯಲ್ಲೂ ಇರಲಿಲ್ಲ. ಇತ್ತೀಚೆಗೆ ಅವರ ಗ್ರಾಮದಲ್ಲಿ ನಡೆದ ಪಕ್ಷದ ಚಟುವಟಿಕೆಗಳಲ್ಲೂ ಅವರಿಗೆ ಆದ್ಯತೆ ಇರಲಿಲ್ಲವೆಂಬ ಅಸಮಾಧಾನಕ್ಕೆ ಅವರು ಒಳಗಾಗಿದ್ದರೆನ್ನಲಾಗಿದೆ.


ಪೆರುವಾಜೆಯಲ್ಲಿರುವ ತನ್ನ ಮಾವನ ಜಮೀನಿನ ವಿಚಾರದಲ್ಲಿಯೂ ಪಕ್ಷದ ದೊಡ್ಡ ನಾಯಕರು ತಮ್ಮ ವಿರೋಧಿಗಳಿಗೆ ಬೆಂಬಲ ನೀಡುತ್ತಿದ್ದಾರೆಂಬ ಅಸಮಾಧಾನ ಅವರಲ್ಲಿದೆ ಎಂದೂ, ಆ ವಿಚಾರವಾಗಿ ಬೆಂಬಲ ಪಡೆಯಲು ಬೊಳ್ಳೂರುರವರು ಸ್ಪೀಕರ್ ಯು.ಟಿ.ಖಾದರ್‌ರವರನ್ನು ಭೇಟಿಯಾಗಿ ಮಾತನಾಡಿದ್ದು, ಈ ಫೋಟೋವನ್ನು ಬಿಜೆಪಿಯೊಳಗಿರುವ ಅವರ ವಿರೋಧಿಗಳೇ ವೈರಲ್ ಮಾಡುತ್ತಿದ್ದಾರೆಂದೂ ಹೇಳಲಾಗುತ್ತಿದೆ.


ಈ ವಿಚಾರಗಳ ಬಗ್ಗೆ ರಾಧಾಕೃಷ್ಣ ಬೊಳ್ಳೂರುರನ್ನು ಸಂಪರ್ಕಿಸಿ ವಿಚಾರಿಸಿದಾಗ, ಇತ್ತೀಚೆಗಿನ ಕೆಲವು ತಿಂಗಳುಗಳಿಂದ ಪಕ್ಷದ ಚಟುವಟಿಕೆಗಳಿಗೆ ನನ್ನನ್ನು ಕರೆಯುವುದನ್ನು ಕಡಿಮೆ ಮಾಡಿದ್ದಾರೆ. ಸುಳ್ಯದಲ್ಲಿ ನಡೆದ ಪ್ರತಿಭಟನೆ ಕುರಿತು ನನಗೆ ಮಾಹಿತಿ ಇರಲಿಲ್ಲ. ನನಗೆ ಮಾತ್ರವಲ್ಲ, ಮಾಜಿ ಸಚಿವ ಅಂಗಾರರಿಗೂ ಎಲ್ಲ ಮಾಹಿತಿ ಕೊಡುವುದಿಲ್ಲ. ನಾನು ಬೇರೆ ಪಕ್ಷ ಸೇರುತ್ತೇನೆಂದು ಯಾರೊಂದಿಗೂ ಹೇಳಿಕೊಂಡಿಲ್ಲ'' ಎಂದು ಹೇಳಿದರು. ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿಯವರನ್ನು ಸಂಪರ್ಕಿಸಿ ವಿಚಾರಿಸಿದಾಗ,ಅದು ರೈತ ಮೋರ್ಚಾದ ಕಾರ್ಯಕ್ರಮ. ರಾಧಾಕೃಷ್ಣ ಬೊಳ್ಳೂರುರವರೇ ಮಾಡಿಸಬೇಕಾದ್ದು. ನಾನು ಅವರಿಗೆ ಹೇಳಿzನೆ. ಬೆಂಗಳೂರಿಗೆ ಹೋಗಲಿಕ್ಕಿದೆ ಎಂದು ಹೇಳಿದರು. ಹೆಚ್ಚಿನ ವಿಷಯ ನನಗೆ ಗೊತ್ತಿಲ್ಲ’.ನಾನು ಅವರೊಂದಿಗೆ ಯಾವಾಗಲೂ ಮಾತನಾಡುತ್ತಿರುತ್ತೇನೆ’ ಎಂದರು.
ಕಾಂಗ್ರೆಸ್ ನಲ್ಲಿರುವಾಗಲೂ ನಾಯಕ : ರಾಧಾಕೃಷ್ಣ ಬೊಳ್ಳುರುರವರು ಕಾಂಗ್ರೆಸ್‌ನಲ್ಲಿರುವಾಗಲೂ ನಾಯಕರಾಗಿದ್ದರು. ತಾಲೂಕು ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಜಿಲ್ಲಾ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಗ್ರಾ.ಪಂ. ಅಧ್ಯಕ್ಷರಾಗಿದ್ದರು. ೨೦೧೧ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಆಗ ಅವರೊಂದಿಗೆ ಅಮರ ಮುಡ್ನೂರು ಪಂಚಾಯತ್‌ನ ಬಹುತೇಕ ಕಾಂಗ್ರೆಸ್ ಸದಸ್ಯರು ಕೂಡಾ ಬಿಜೆಪಿ ಸೇರಿದ್ದರಿಂದ ಕಾಂಗ್ರೆಸ್ ಪಂಚಾಯತ್ ಬಿಜೆಪಿ ಪಂಚಾಯತ್ ಆಗಿ ಪರಿವರ್ತಿತವಾಗಿತ್ತು. ನಂತರ ಅವರು ಎಪಿಎಂಸಿ ಸದಸ್ಯರಾಗಿ, ತಾಲೂಕು ಪಂಚಾಯತ್ ಸದಸ್ಯರಾಗಿ ಬಿಜೆಪಿಯಿಂದ ಜಯಗಳಿಸಿದ್ದರು. ಎಪಿಎಂಸಿ ಉಪಾಧ್ಯಕ್ಷ ಹಾಗೂ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಈಗ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದಾರೆ.