ಶೌರ್ಯ ವಿಪತ್ತು ತಂಡದಿಂದ ಅಂತ್ಯ ಸಂಸ್ಕಾರ
ಸಂಸಾರವನ್ನು ಬಿಟ್ಟು ಒಬ್ಬಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೋರ್ವರು ತನ್ನ ಮನೆಯೊಳಗೆ ಮಲಗಿದ್ದಲ್ಲೇ ಕೊನೆಸಿರೆಳೆದು, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಕಂದಡ್ಕ ಬಳಿಯ ಮುಂಡೋಕಜೆಯಿಂದ ವರದಿಯಾಗಿದೆ.
ಅಮರ ಮುಡ್ನೂರು ಗ್ರಾಮದ ಮುಂಡಕಜೆ ನಾರಾಯಣ ನಾಯ್ಕ ಎಂಬವರೇ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ನಾರಾಯಣ ನಾಯ್ಕರವರು ವಿವಾಹಿತರಾಗಿದ್ದರೂ ಇವರು ಕುಡಿತದ ಚಟ ಹೊಂದಿದ್ದರಿಂದ ಪತ್ನಿ ಇವರಿಂದ ದೂರ ಉಳಿದಿದ್ದರು. ಮಕ್ಕಳನ್ನು ಮದುವೆ ಮಾಡಿ ಕೊಡಲಾಗಿತ್ತು. ಹೀಗಾಗಿ ನಾರಾಯಣ ನಾಯ್ಕರವರು ಸ್ಥಳೀಯವಾಗಿ ಕೂಲಿ ಕೆಲಸ ಮಾಡಿಕೊಂಡು ಒಬ್ಬರೇ ಜೀವಿಸುತ್ತಿದ್ದರು. ಮಾತ್ರವಲ್ಲದೇ ನೆರೆಮನೆಮಂದಿಯಲ್ಲಿಯೂ ಮಾತುಕತೆ ಇರಲಿಲ್ಲ.
ಎರಡು ದಿನದಿಂದ ಪರಿಸರವೆಲ್ಲಾ ದುರ್ವಾವಾಸನೆ ಬರತೊಡಗಿತೆಂದೂ, ಅನುಮಾನಗೊಂಡ ನೆರೆಮನೆಯಯವರೊಬ್ಬರು ವಾಸನೆ ಬರುವ ಮೂಲ ಹುಡುಕತೊಡಗಿದರೆಂದೂ, ಅನುಮಾನದಲ್ಲಿ ನಾರಾಯಣ ನಾಯ್ಕರವರ ಮನೆಯ ಕಡೆ ಹೋಗಿ ನೋಡಿದಾಗ ಅವರು ಮೃತಪಟ್ಟು ಕೊಳೆತ ಸ್ಥಿತಿಯಲ್ಲಿರುವುದು ಕಂಡು ಬಂತೆನ್ನಲಾಗಿದೆ. ಬಳಿಕ ಸ್ಥಳೀಯರಿಗೆ ವಿಷಯ ಗೊತ್ತಾಗಿ, ಅವರು ಶೌರ್ಯ ವಿಪತ್ತು ಘಟಕದವರಿಗೆ ಮತ್ತು ಪೋಲೀಸರಿಗೆ ವಿಷಯ ತಿಳಿಸಿ, ಅವರು ಬಂದು ಮಹಜರು ನಡೆಸಿ ಬಳಿಕ ದೊಡ್ಡತೋಟ ಘಟಕದ ಶೌರ್ಯ ವಿಪತ್ತು ಘಟಕದವರು ಜೆಸಿಬಿಯ ಮೂಲಕ ಗುಂಡಿ ತೋಡಿ ನಾರಾಯಣ ನಾಯ್ಕರವರ ಅಳಿಯ ಮತ್ತು ಸಹೋದರ ಹಾಗೂ ಸ್ಥಳೀಯರ ಉಪಸ್ಥಿತಿಯಲ್ಲಿ
ದಫನ ಕಾರ್ಯ ನಡೆಸಿದರು.
ಶೌರ್ಯ ವಿಪತ್ತು ಘಟಕದ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರೆಂದು ತಿಳಿದು ಬಂದಿದೆ.