ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣ: ಜೀವಾವಧಿ ಶಿಕ್ಷೆ ತೀರ್ಪು ಪ್ರಕಟ ಹಿನ್ನೆಲೆ

0

ಚಿಕಿತ್ಸಾ ವ್ಯವಸ್ಥೆಗೆ ನ್ಯಾಯಾಧೀಶರ ಸೂಚನೆ: ಡಾ. ರೇಣುಕಾಪ್ರಸಾದ್ ಆಸ್ಪತ್ರೆಗೆ

ಶಿಕ್ಷೆಗೊಳಗಾದ ಉಳಿದ ನಾಲ್ವರು ಶಿವಮೊಗ್ಗ ಜೈಲಿಗೆ; ಆಕಾಶ ಭವನ ಶರಣ್ ಗೆ ಸರ್ಚ್ ವಾರಂಟ್

ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಡಳಿತಾಧಿಕಾರಿಯಾಗಿದ್ದ ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವವರಲ್ಲಿ ಡಾ.ರೇಣುಕಾಪ್ರಸಾದ್ ರಿಗೆ ಆರೋಗ್ಯ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ನಿನ್ನೆ ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.

ರೇಣುಕಾಪ್ರಸಾದರು 63 ವರ್ಷ ವಯಸ್ಸಿನವರಾಗಿದ್ದು, ಹಲವು ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಇದೀಗ ಶಿಕ್ಷೆ ಘೋಷಣೆಯ ಬಳಿಕ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆದ್ದರಿಂದ ಅವರಿಗೆ ಚಿಕಿತ್ಸಾ ವ್ಯವಸ್ಥೆ ಮಾಡಬೇಕು ಎಂದು ನಿನ್ನೆ ಶಿಕ್ಷೆ ಪ್ರಕಟವಾದ ಬಳಿಕ ಅವರ ಪರ ವಕೀಲರು ನ್ಯಾಯಾಧೀಶರಲ್ಲಿ ಕೇಳಿಕೊಂಡಾಗ, ಡಾ.ರೇಣುಕಾಪ್ರಸಾದ್ ರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಜೈಲು ಅಧೀಕ್ಷಕರಿಗೆ ನ್ಯಾಯಾಧೀಶರು ಆದೇಶ ನೀಡಿದರು.


ಅದರಂತೆ ರಾತ್ರಿ ಹನ್ನೊಂದು ಗಂಟೆಗೆ ರೇಣುಕಾಪ್ರಸಾದ್ ರನ್ನು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.

ಜೀವಾವಧಿ ಶಿಕ್ಷೆಗೊಳಗಾದವರನ್ನು ಮಂಗಳೂರು ಸಬ್ ಜೈಲಿನಲ್ಲಿ ಇರಿಸಿಕೊಳ್ಳುವಂತಿಲ್ಲವಾದುದರಿಂದ ಜೀವಾವಧಿಗೊಳಗಾದ ಉಳಿದ ನಾಲ್ವರನ್ನು ಶಿವಮೊಗ್ಗ ಸೆಂಟ್ರಲ್ ಜೈಲ್ ಗೆ ಕಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ನಿನ್ನೆ ನ್ಯಾಯಾಲಯಕ್ಕೆ ಹಾಜರಾಗದ ಆಕಾಶ ಭವನ ಶರಣ್ ಬಂಧನಕ್ಕೆ ಸರ್ಚ್ ವಾರಂಟ್ ಹೊರಡಿಸುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.