ಪಂಚಾಯತ್ ರಾಜ್ ಇಲಾಖೆಯಲ್ಲಿ ಪುರುಷೋತ್ತಮರವರ ಸೇವೆ ಅಮೋಘವಾದುದು – ಇ.ಒ.ರಾಜಣ್ಣ
ಹರಿಹಲ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಪಿಡಿಒ ಆಗಿದ್ದ ಮಣಿಯಾನ ಪುರುಷೋತ್ತಮರವರು ಸೆ.30 ರಂದು ಸೇವಾ ನಿವೃತ್ತಿ ಹೊಂದಿದ್ದು
ಅವರಿಗೆ ತಾಲೂಕು ಪಂಚಾಯತ್ ವತಿಯಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವು ಅ.13 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಮಣಿಯಾನ ಪುರುಷೋತ್ತಮ ಮತ್ತು ಶ್ರೀಮತಿ ಸ್ನೇಹಲತಾ ದಂಪತಿಗೆ ಶಾಲು ಹೊದಿಸಿ ,ಫಲ ಪುಷ್ಮ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಪುರುಷೋತ್ತಮರವರು ಪಂಚಾಯತ್ ರಾಜ್ ಇಲಾಖೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ.ಸಾಧಕ ಬಾಧಕಗಳನ್ನು ಅನುಭವಿಸಿದ್ದಾರೆ.ಇವರು ಒತ್ತಡದ ಮಧ್ಯೆ ಕೆಲಸ ಮಾಡಿದವರು .ಇವರ ಕೆಲಸ ಅಮೋಘವಾದುದು .ಬಡವರ ಬಗ್ಗೆ ಕಾಳಜಿ ವಹಿಸಿ ಅವರಿಗೆ ಆಶ್ರಯದಾತರು ಕೂಡ ಆಗಿದ್ದರು ಎಂದು ಹೇಳಿ ಸೇವೆಯನ್ನು ಶ್ಲಾಘಿಸಿ ,ನಿವೃತ್ತಿ ಜೀವನಕ್ಕೆ ಶುಭಕೋರಿದರು.
ತಾಲೂಕು ಪಂಚಾಯತ್ ವ್ಯವಸ್ಥಾಪಕರಾದ ಹರೀಶ್ ರವರು ಮಾತನಾಡಿ ಪುರುಷೋತ್ತಮರವರು ಉತ್ತಮ ಅನುಭವಿ ಕೆಲಸಗಾರ,ಈಗಲೂ ಯುವಕರ ಹಾಗೆ ಇದ್ದು ಇನ್ನೂ ಹತ್ತು ವರ್ಷ ಇಲಾಖೆಯಲ್ಲಿ ಕೆಲಸ ಮಾಡಬಹುದಿತ್ತು ಎಂದು ಹೇಳಿದರು.
ಹೊಂದಾಣಿಕೆಗೆ ಒಗ್ಗಿಕೊಂಡು ಹೋದವರು – ಪಿ.ಡಿ.ಒ ಶ್ಯಾಮ್ ಪ್ರಸಾದ್
ಐವರ್ನಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ರವರು ಮಾತನಾಡಿ ಪುರುಷೋತ್ತಮರವರು
ಹೊಂದಾಣಿಕೆಗೆ ಒಗ್ಗಿಕೊಂಡು ಹೋಗಿ ಕೆಲಸ ಮಾಡಿದವರು ವರು.ಅವರದೇ ಆದಂತಹ ರೀತಿ,ನೀತಿಗಳನ್ನು ರೂಢಿಸಿಕೊಂಡವರು.ಈಗ ಕೆಲಸದಲ್ಲಿ ಬಹಳಷ್ಟು ಒತ್ತಡಗಳಿವೆ.ಒತ್ತಡದ ಮಧ್ಯೆ ನೆಮ್ಮದಿಯಿಂದ ಸುದೀರ್ಘ 37 ವರ್ಷಗಳ ಕಾಲ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ ಎಂದು ಹೇಳಿ ನಿವೃತ್ತ ಜೀವನಕ್ಕೆ ಶುಭಹಾರೈಸಿದರು.
ಚಾಲೆಂಜನ್ನು ಫೇಸ್ ಮಾಡಿದವರು – ಪಿಡಿಒ ರವಿಚಂದ್ರ
ಉಬರಡ್ಕ ಗ್ರಾಮ ಪಂಚಾಯತ್ ಪಿಡಿಒ ರವಿಚಂದ್ರರವರು ಮಾತನಾಡಿ ಮಣಿಯಾನ ಪುರುಷೋತ್ತಮರವರು ಹಲವು ಪಂಚಾಯತ್ ಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.ಹರಿಹರ ಪಂಚಾಯತ್ ನಲ್ಲಿ ಪಿಡಿಒ ಆಗಿದ್ದ ಸಂದರ್ಭದಲ್ಲಿ ಹರಿಹರ, ಬಾಳುಗೋಡು,ಕೊಲ್ಲಮೊಗ್ರ ಕಡೆಗಳಲ್ಲಿ ನೆರೆ ಬಂದು ಪ್ರಾಕೃತಿಕ ವಿಕೋಪ ಆದ ಸಂದರ್ಭದಲ್ಲಿ ಬಹಳಷ್ಟು ಕಷ್ಟ ಅನುಭವಿಸಿದ್ದಾರೆ.
ಬೆಳಿಗ್ಗೆ 6.00 ಗಂಟೆಗೆ ಇವರು ಹರಿಹರದಲ್ಲಿ ಇರುತ್ತಿದ್ದರು.
ನಮಗೆ ಆ ಕಡೆಗೆ ಹೋಗಲು ಆಗದಿದ್ದಾಗ ಕೂಡ ಇವರು ಅಲ್ಲಿಗೆ ಹೋಗಿ ನಮಗೆ ಅಲ್ಲಿಂದ ಮಾಹಿತಿಗಳನ್ನು ನೀಡುತ್ತಿದ್ದರು.ಗ್ರಾಮಸ್ಥರೊಂದಿಗೆ ಪಂಚಾಯತ್ ಆಡಳಿತ ಮಂಡಳಿಯೊಂದಿಗೆ ಉತ್ತಮ ಬಾಂದವ್ಯ ಇಟ್ಟುಕೊಂಡಿದ್ದರು.ಆ ಸಂದೃಭದಲ್ಲಿ ಚಾಲೆಂಜನ್ನು ಫೇಸ್ ಮಾಡಿದ್ದಾರೆ.ಜನಾನುರಾಗಿಯಾಗಿ,ಅನುಭವಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರ ಮುಂದಿನ ಜೀವನ ಆಯುರಾರೋಗ್ಯದಿಂದ ಕೂಡಿರಲಿ ಎಂದು ಶುಭಹಾರೈಸಿದರು.
ಸನ್ಮಾನ ಸ್ವೀಕರಿಸಿದ ಮಣಿಯಾನ ಪುರುಷೋತ್ತಮರವರು ಮಾತನಾಡಿ ತಾನು 37 ವರ್ಷಗಳ ಕಾಲ ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿಕೊಂಡು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ
ಸಹಾಯಕ ನಿರ್ದೇಶಕರಾದ ಶ್ರೀಮತಿ ಸರೋಜಿನಿ,ಪಂಚಾಯತ್ ರಾಜ್ ವಿಭಾಗದ ಶ್ರೀಮತಿ ಗೀತಾ ಪಿ.ಎಸ್, ಗುತ್ತಿಗಾರು ಗ್ರಾಮ ಪಂಚಾಯತ್ ಪಿಡಿಒ ಧನಪತಿ ಉಪಸ್ಥಿತರಿದ್ದರು.
ಮುರುಳ್ಯ ಗ್ರಾ.ಪಂ.ಪಿಡಿಒ ಸೀತಾರಾಮ ಸಂಪ್ಯಾಡಿ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿ ಮಣಿಯಾನ ಪುರುಷೋತ್ತಮರವರೊಂದಿಗೆ ಸೇವೆ ಸಲ್ಲಿಸಿದ ಮತ್ತು ಒಡನಾಟದ ದಿನಗಳನ್ನು ನೆನಪಿಸಿ ಶುಭಹಾರೈಸಿದರು.
ಅಮರಮುಡ್ನೂರು ಗ್ರಾ.ಪಂ.ಪಿಡಿಒ ದಯಾನಂದ ಪತ್ತುಕುಂಜ ಕಾರ್ಯಕ್ರಮ ನಿರೂಪಿಸಿ,ಪಿಡಿಒ ಶ್ಯಾಮ್ ಪ್ರಸಾದ್ ಪ್ರಾರ್ಥಿಸಿ,ಪಿಡಿಒ ಧನಪತಿ ವಂದಿಸಿದರು.