ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

0

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಹಿತಾಸಕ್ತಿಯ ವಿರುದ್ಧವಾಗಿ ವರ್ತಿಸುತ್ತಿದೆ : ಭಾಗೀರಥಿ ಮುರುಳ್ಯ

ರಾಜ್ಯ ಸರ್ಕಾರದ ಕಮಿಷನ್ ದಂಧೆ, ಭ್ರಷ್ಟಾಚಾರ ಆಡಳಿತ ಹಾಗೂ ಜನ ವಿರೋಧಿ ನಿಲುವು ಖಂಡಿಸಿ, ಹಾಗೂ ಸರಕಾರದ ವಿರುದ್ಧ ರಾಜ್ಯಪಾಲರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸುಳ್ಯ ಭಾರತೀಯ ಜನತಾ ಪಾರ್ಟಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಇಂದು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಳ್ಳ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ’ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರ ಹಿತಾಸಕ್ತಿಯ ವಿರುದ್ಧವಾಗಿ ವರ್ತಿಸುತ್ತಿದೆ. ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದಂತಹ ಹಲವು ಜನಪರ ಯೋಜನೆಗಳನ್ನು ರದ್ದುಗೊಳಿಸಿ, ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸುವ ಮುಖಾಂತರ ಜನರಿಗೆ ವಂಚನೆಯನ್ನು ಮಾಡುತ್ತಿದೆ. ನಮ್ಮಲ್ಲಿ ರೈತರು ಅಡಿಕೆ ಗಿಡಗಳಿಗೆ ಉಂಟಾಗಿರುವ ರೋಗಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ನಮ್ಮ ಬಹುಮುಖ್ಯ ಬೇಡಿಕೆಯಾದ ೧೧೦ ಕೆವಿ ವಿದ್ಯುತ್ ವಿಚಾರವಾಗಿ ಸರ್ಕಾರ ಯಾವುದೇ ಕಾರ್ಯವನ್ನು ಮಾಡುತ್ತಿಲ್ಲ. ಇವರ ಜನ ವಿರೋಧಿ ನೀತಿಯಿಂದ ಬಿಜೆಪಿ ಪಕ್ಷವು ಕಳೆದ ನಾಲ್ಕು ತಿಂಗಳುಗಳಿಂದ ನಾಲ್ಕು ಬಾರಿ ಬೇರೆ ಬೇರೆ ಪ್ರತಿಭಟನೆಗಳನ್ನು ಮಾಡುವ ಅನಿವಾರ್ಯತೆಗೆ ಬಂದಿದೆ. ಆದ್ದರಿಂದ ರಾಜ್ಯ ಸರ್ಕಾರವು ಕೂಡಲೇ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಗಳನ್ನು ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.


ಇದಕ್ಕೂ ಮೊದಲು ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ, ’ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಕಂಟ್ರಾಕ್ಟರ್ ಮನೆಯಲ್ಲಿ ರೂ ೪೨ ಕೋಟಿ ನಗದು ಹಣ ಐ ಟಿ ದಾಳಿಯಲ್ಲಿ ಸಿಕ್ಕಿದ್ದು ಸುದ್ದಿಯಾಗಿದೆ. ಈ ಹಣ ಕಮಿಷನ್ ರೂಪದಲ್ಲಿ ಬಂದಿರುವ ಹಣವಾಗಿದೆ ಎನ್ನುವುದು ಪ್ರಚಲಿತವಾಗಿದೆ. ಕಾಂಗ್ರೆಸ್ ಸರ್ಕಾರ ಕಂಟ್ರಾಕ್ಟರ್‌ಗಳಿಗೆಂದು ನೀಡಿದ ಬಾಕಿ ಹಣ ರೂ ೬೫೦ ಕೋಟಿ ಗೆ ಪ್ರತಿಯಾಗಿ ಕಂಟ್ರಾಕ್ಟರ್‌ಗಳು ನೀಡಿದ ಕಮಿಷನ್ ಹಣ ಈ ೪೨ ಕೋಟಿ. ಇದಲ್ಲದೆ ಇನ್ನೂ ಸಾವಿರಾರು ಕೋಟಿ ಹಣ ಸಂಗ್ರಹ ಮಾಡಿ ನಮ್ಮ ರಾಜ್ಯದ ಹಣವನ್ನು ಪಂಚ ರಾಜ್ಯ ಚುನಾವಣೆಯ ಖರ್ಚಿಗೆ ಕಾಂಗ್ರೆಸ್ ಉಪಯೋಗಿಸಲು ಹೊರಟಿದೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಕಲೆಕ್ಟನ್ ಕೇಂದ್ರವಾಗಿದೆ.ರಾಜ್ಯದ ಹಲವಾರು ಕಡೆಗಳಲ್ಲಿ ಬರಕ್ಕೆ ತುತ್ತಾಗಿರುವ ರೈತರಿಗೆ ಪರಿಹಾರ ನೀಡಿಲ್ಲ ,ವಿದ್ಯುತ್ ಕಡಿತ ವಿಪರೀತವಾಗಿದೆ, ವರ್ಗಾವಣೆ ದಂಧೆ ಮಿತಿಮೀರಿದೆ. ತುಷ್ಟೀಕರಣದಲ್ಲಿ ಸರ್ಕಾರ ಮುಳುಗಿದ್ದು, ಇದರಿಂದ ಹೊರಬರಲು ಕಾಂಗ್ರೆಸ್ ಚಡಪಡಿಸುತ್ತಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಆದ್ದರಿಂದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡಿಂಜಿ ಮಾತನಾಡಿ, ’ಪ್ರಸ್ತುತ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಕೇವಲ ನಾಲ್ಕು ತಿಂಗಳಲ್ಲಿ ಜನರಿಗೆ ಸಂಕಷ್ಟದ ಮೇಲೆ ಸಂಕಷ್ಟವನ್ನು ತರುತ್ತಿದೆ. ಇನ್ನು ಇವರು ಐದು ವರ್ಷ ಅಧಿಕಾರ ನಡೆಸಿದರೆ ರಾಜ್ಯದ ಜನರ ಪರಿಸ್ಥಿತಿ ಏನಾಗಬಹುದೆಂದು ಪ್ರಶ್ನಿಸಿದರು. ಇವರ ಈ ದುರಾಡಳಿತದಿಂದ ಕಾಂಗ್ರೆಸ್ಸಿನವರಿಗೂ ಕೂಡ ಆತಂಕ ಎದುರಾಗಿದೆ ಎಂದರು. ಕಾಂಗ್ರೆಸಿನಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು ಅವರವರೇ ಪರಸ್ಪರ ಕಚ್ಚಾಡುತ್ತಿದ್ದಾರೆ ಎಂದರು. ಕಾಂಗ್ರೆಸ್ ಸರ್ಕಾರದ ಸಿ.ಎಂ ಮತ್ತು ಡೆಪ್ಯುಟಿ ಸಿ.ಎಂ ರಾಜೀನಾಮೆಯನ್ನು ಕೂಡಲೇ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರುಗಳಾದ ಸುಭೋದ್ ಶೆಟ್ಟಿ ಮೇನಾಲ, ಎ ವಿ ತೀರ್ಥರಾಮ, ಪಿ ಕೆ ಉಮೇಶ್, ಚನಿಯ ಕಲ್ತಡ್ಕ, ಜಗದೀಶ್ ಸರಳಿಕುಂಜ, ಸುನಿಲ್ ಕೇರ್ಪಳ, ವಿನಯ ಮುಳುಗಾಡು, ರವಿಚಂದ್ರ ಕೊಡಿಯಾಲಬೈಲು, ಜಿನ್ನಪ್ಪ ಪೂಜಾರಿ, ದಿನೇಶ್ ಅಡ್ಕಾರು, ಹೊನ್ನಪ್ಪ ಗೌಡ, ಕೇಶವ ಅಡ್ತಲೆ, ಗೋಪಾಲಕೃಷ್ಣ ನಡುಬೈಲು, ಪ್ರದೀಪ್ ಕೋಲ್ಚಾರು, ಸುರೇಶ್ ಕಣೆಮರಡ್ಕ, ಸೋಮನಾಥ ಪೂಜಾರಿ, ವಾಸುದೇವ ನಾಯಕ್, ಆನಂದರಾವ್ ಕಾಂತಮಂಗಲ, ಮಹೇಶ್ ರೈ ಮೇನಾಲ, ಕಮಲಾಕ್ಷ ರೈ ಮೇನಾಲ ,ಅಶೋಕ್ ಪೀಚೆ, ಶಿವನಾಥರಾವ್ ಹಳೆಗೇಟು, ನಗರ ಪಂಚಾಯತಿ ಸದಸ್ಯರುಗಳಾದ ಶಿಲ್ಪಾ ಸುದೇವ್, ಶಶಿಕಲಾ ನೀರಬಿದಿರೆ, ಕಿಶೋರಿ ಶೇಟ್, ಮೋಹಿನಿ ನಾಗರಾಜ್, ಬೂಡು ರಾಧಾಕೃಷ್ಣ ರೈ, ಬುದ್ಧ ನಾಯ್ಕ್ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು.
ನಗರ ಪಂಚಾಯತ್ ಸದಸ್ಯ ವಿನಯಕುಮಾರ್ ಕಂದಡ್ಕ ವಂದಿಸಿದರು.


ಬಳಿಕ ಸುಳ್ಯ ತಹಶೀಲ್ದಾರ್ ಮಂಜುನಾಥ್ ರವರ ಮೂಲಕ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಯವರಿಗೆ ಪಕ್ಷದ ವತಿಯಿಂದ ತಂದಿದ್ದ ಮನವಿ ಪತ್ರವನ್ನು ಹಸ್ತಾಂತರಿಸಿದರು.