ತನಗೆ 2೦ ಕೆಜಿ ಕೋಳಿ ಮಾಂಸ ಬೇಕೆಂದು ಫೋನ್ ಮಾಡಿ ಹೇಳಿದ ಅನಾಮಿಕನೊಬ್ಬ ಮಾಂಸ ಮಾಡಿದ ಕೋಳಿಯನ್ನು ಕೊಂಡೊಯ್ಯದೆ ಅಂಗಡಿ ಮಾಲಕನ ಬ್ಯಾಂಕ್ ಖಾತೆಯಿಂದಲೇ 72೦೦ ರೂ.ಪೀಕಿಸಿದ ವಿಲಕ್ಷಣ ಘಟನೆ ಸುಳ್ಯದಲ್ಲಿ ನಡೆದಿದೆ.
ವಾಟ್ಸಾಪ್ ಡಿಪಿಯಲ್ಲಿರುವ ಫೊಟೋ
ಸುಳ್ಯ ಬಾಳೆಮಕ್ಕಿಯಲ್ಲಿರುವ ಪ್ರಗತಿ ಚಿಕನ್ ಸ್ಟಾಲ್ ಮಾಲಕ ಅಝೀಝ್ ಎಂಬವರಿಗೆ ಹಿಂದಿಯಲ್ಲಿ ಮಾತನಾಡಿದಾತನೊಬ್ಬ ನನಗೆ ನಾಳೆ ಬೆಳಿಗ್ಗೆಗೆ 2೦ ಕೆಜಿ ಕೋಳಿ ಮಾಂಸ ಬೇಕು ಕಟ್ಟಿಡಿ,ನಾನು ಈಗ ಬರುತ್ತೇನೆ ಎಂದು ಹೇಳಿದನೆನ್ನಲಾಗಿದೆ. ತನಗೆ ಸರಿಯಾಗಿ ಹಿಂದಿಯಲ್ಲಿ ವ್ಯವಹರಿಸಲು ಆಗದ ಕಾರಣ ಅಝೀಜ್ ತನ್ನ ಅಂಗಡಿಯಲ್ಲಿ ಕೆಲಸಕ್ಕಿರುವ ಹಿಂದಿ ಮಾತನಾಡುವ ಯುವಕನಿಗೆ ಈ ಫೋನ್ ಮಾಡಿದಾತನೊಂದಿಗೆ ವ್ಯವಹರಿಸಲು ಬಿಟ್ಟರು. ಅಂಗಡಿಯ ಯುವಕ ಮರುದಿನ ಬೆಳಿಗ್ಗೆ ೩೬ ಕೆಜಿ ಕೋಳಿಯಿಂದ 2೦ ಕೆಜಿ ಕೋಳಿ ಮಾಂಸ ಸಿದ್ಧಗೊಳಿಸಿ ಹಿಂದಿನ ದಿನ ಫೋನ್ ಮಾಡಿದ ವ್ಯಕ್ತಿಗೆ ಕರೆ ಮಾಡಿದ್ದಲ್ಲದೆ, ಮಾಂಸದ ದರದ ವಿವರಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸಿದ. ಮಾಂಸಕ್ಕೆ ಆರ್ಡರ್ ಕೊಟ್ಟ ಹಿಂದಿ ಮಾತನಾಡಿದಾತ ನಾನು ಗೂಗಲ್ ಪೇ ಮಾಡುತ್ತೇನೆ, ನೀವು ನನಗೆ 1 ರೂ. ಕಳುಹಿಸಿ ಎಂದು ಹೇಳಿದನೆನ್ನಲಾಗಿದೆ.
ಹೀಗೇ 5ರೂ, 1೦ ರೂ, 2೦ ರೂಅತ್ತ ಇತ್ತ ಕಳುಹಿಸಿಕೊಂಡ ಮೇಲೆ, ನನಗೆ ಈಗ 72೦೦ ರೂ.ಕಳುಹಿಸು ನಿನಗೆ 14೦೦೦ ರೂ.ಕಳುಹಿಸುತ್ತೇನೆ ಎಂದು ಆತ ಹೇಳಿದನೆನ್ನಲಾಗಿದೆ. ಇದನ್ನು ನಂಬಿದ ಅಂಗಡಿ ಕೆಲಸದಾತ ಮಾಲಕರ ಖಾತೆಯಿಂದ 72೦೦ ರೂ.ಗಳನ್ನು ಕಳುಹಿಸಿದ.
ಹಣ ತಲುಪಿದ ನಂತರ ಅತ್ತ ಕಡೆಯಿಂದ ನಿರುತ್ತರ. ಈಗ ಮಾಂಸ ಮಾಡಿದ 36 ಕೆಜಿಕೋಳಿಯೂ ಇವರ ಅಂಗಡಿಯಲ್ಲಿ ಬಾಕಿ. 72೦೦ ರೂ. ಕೂಡಾ ಖಾತೆಯಿಂದ ಖಾಲಿ. ಈಗ ಪೊಲೀಸ್ ದೂರು ನೀಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇಂತಹುದೇ ಘಟನೆ ಒಂದು ತಿಂಗಳ ಹಿಂದೆ ಗುತ್ತಿಗಾರಿನ ಕೋಳಿ ಅಂಗಡಿಯೊಂದರಲ್ಲಿ ನಡೆದಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದಿದ್ದರೂ ಆ ವಿಷಯ ತಿಳಿಯದೇ ಇದ್ದ ಕೋಳಿ ಅಂಗಡಿಯವರು ಮೋಸ ಹೋಗುತ್ತಲೇ ಇದ್ದಾರೆ.