ಅರಂತೋಡು ಗ್ರಾಮಕ್ಕೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಭೇಟಿ

0

ಹಳದಿ ಎಲೆ ಕೃಷಿತೋಟ ಹಾಗೂ ಶಾಲೆಗಳಿಗೆ ಭೇಟಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಡಾ. ಆನಂದ್ ಅವರು ನ.9ರಂದು ಅರಂತೋಡು ಗ್ರಾಮ ಪಂಚಾಯತಿ ಹಾಗೂ ಗ್ರಾಮದ ಶಾಲೆ, ಅಡಿಕೆ ಎಲೆ ರೋಗ ಪೀಡಿತ ಕೃಷಿ ತೋಟಗಳಿಗೆ ಭೇಟಿ ನೀಡಿದರು.

ಅರಂತೋಡು ಗ್ರಾಮ ಪಂಚಾಯತಿಯ ಜಮಾಬಂಧಿ ಕಾರ್ಯಕ್ರಮವು ನ.9ರಂದು ಗ್ರಾಮ ಪಂಚಾಯಿತಿಯ ಅಮೃತ ಸಭಾಂಗಣದಲ್ಲಿ ನಡೆಯಿತು

ನೋಡಲ್ ಅಧಿಕಾರಿಯಾಗಿ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅವರು ಭಾಗವಹಿಸಿದ್ದರು. ಸುಳ್ಯ ತಾ.ಪಂ.‌ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು. ಗ್ರಾ.ಪಂ. ಅಧ್ಯಕ್ಷ ಕೇಶವ ಆಡ್ತಲೆ ಅವರು ಸ್ವಾಗತಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್. ಅವರು ಜಮಾಖರ್ಚಿನ ವರದಿ ವಾಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಸದಸ್ಯರು, ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಭವಾನಿ ಚಿಟ್ಟನ್ನೂರು ವಂದಿಸಿದರು.

ಜಮಾಬಂಧಿ ಕಾರ್ಯಕ್ರಮದ ಬಳಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅವರು ಅರಂತೋಡು ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣ ವೀಕ್ಷಿಸಿದರಲ್ಲದೇ, ಶಾಲಾ ಮಕ್ಕಳ ತರಗತಿ ಕೋಣೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿದರು. ಅಲ್ಲಿಂದ ಪೆತ್ತಾಜೆ ಶಾಲೆಯ ಆವರಣ ಗೋಡೆ, ಅಡ್ಯಡ್ಕದ ಹಳದಿ ಎಲೆ ರೋಗ ಪೀಡಿತ ಅಡಿಕೆ ತೋಟಗಳು ಮತ್ತು ಕೇಶವಪ್ರಸಾದ್ ತೋಡಿಕಾನ ಅವರ ಕೃಷಿ ತೋಟಕ್ಕೆ ಭೇಟಿ ನೀಡಿದರು.