ಅಡಿಕೆ ಕೃಷಿಕರ ಸಂಕಷ್ಟವನ್ನು ಸಂಸದರು ಅರಿತುಕೊಳ್ಳಬೇಕು : ಎಂ.ವೆಂಕಪ್ಪ ಗೌಡ
ಅಡಿಕೆ ಎಲೆ ಹಳದಿ ರೋಗದ ಪರಿಣಾಮ ಅಡಿಕೆ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಆದರೂ ಬೆಳೆಯುವ ಒಂದಷ್ಟು ಅಡಿಕೆಗೆ ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಈ ಸಂದರ್ಭ ಕಳ್ಳಮಾರ್ಗದ ಮೂಲಕ ವಿದೇಶದಿಂದ ಅಡಿಕೆ ಬರುತಿದೆ. ಇದು ಖೇದಕರ. ಇದನ್ನು ತಡೆಯಬೇಕಾದುದು ಯಾರು ಎಂಬ ಪ್ರಶ್ನೆ ಮೂಡಿದೆ ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ನ.17 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಹಳದಿ ಎಲೆ ರೋಗದಿಂದ ಈ ಭಾಗದ ಅಡಿಕೆ ಕೃಷಿಕರ ಪರಿಸ್ಥಿತಿ ಚೆನ್ನಾಗಿಲ್ಲ. ಇದರ ಜತೆಯಲ್ಲೆ ಇರುವ ಒಂದಷ್ಟು ಅಡಿಕೆ ಕೃಷಿ ಇದ್ದರೂ ಅಕಾಲಿಕ ಮಳೆಯಿಂದ ಉದುರಿ ಹೋಗಿದೆ. ಇದರ ಜತೆಯಲ್ಲಿ ವಿದೇಶದಿಂದಲೂ ಕಳ್ಳ ಮಾರ್ಗದ ಮೂಲಕ ಅಡಿಕೆ ಆಮದು ಮಾಡಲಾಗುತಿದೆಯಂತೆ. ಇದನ್ನು ತಡೆಯಬೇಕಾದವರು ಯಾರು ?. ಹೀಗೆ ಬರುವ ಅಡಿಕೆಯ ಪರಿಣಾಮ ಇಲ್ಲಿಯ ಕೃಷಿಕರು ಬೆಳೆದ ಅಡಿಕೆಗೆ ಬೆಲೆ ಸಿಗದಂತಾಗಿದೆ. ಇದನ್ನು ಕೇಂದ್ರ ಸರಕಾರ ತಡೆಯಬೇಕು. ಇಲ್ಲಿಯ ಸಂಸದರು ಅಡಿಕೆ ಕೃಷಿಕರ ಸಮಸ್ಯೆಯನ್ನು ಅರಿತು ಪರಿಹಾರ ಮಾಡಬೇಕು. ಅವರು ಅಡಿಕೆ ಕೃಷಿಕರ ಸಂಕಷ್ಟಕ್ಕೆ ಸ್ಪಂದಿಸದೇ ಇದ್ದರೆ ಅವರಿಗೆ ಯಾಕೆ ಮತ ಹಾಕಿ ಗೆಲ್ಲಿಸಬೇಕು ಎಂದು ವೆಂಕಪ್ಪ ಗೌಡರು ಪ್ರಶ್ನಿಸಿದರು.
ಬಿಜೆಪಿ ಸರಕಾರ ಅಡಿಕೆ ಎಲೆ ರೋಗ ಸಂಶೋಧನೆ ಗಾಗಿ 25 ಕೋಟಿ ರೂ ವನ್ನು ಘೋಷಣೆ ಮಾಡಿದೆ. ಅದು ಎಲ್ಲಿದೆ. ಮೊದಲು ಆ ಹಣ ರೈತರ ಉಪಯೋಗಕ್ಕೆ ಬರಲಿ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಚುನಾವಣೆ ಸಂದರ್ಭ ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡಿದ್ದು ಹೌದು. ಆದರೆ ಕರಾವಳಿಯಲ್ಲಿ ನಿರೀಕ್ಷಿತ ಸ್ಥಾನ ಸಿಕ್ಕಿಲ್ಲ. ಇಲ್ಲಿಂದ ಗೆದ್ದವರು ಈ ಬಗ್ಗೆ ಧ್ವನಿ ಎತ್ತಬೇಕಲ್ಲವೇ. ಯಾಕೆ ಸುಮ್ಮನಿದ್ದಾರೆ ಎಂದು ಹೇಳಿದ ಅವರು ನಮ್ಮ ಸರಕಾರ ಇದೆ. ನಾವು ಈ ಬಗ್ಗೆ ಸರಕಾರಕ್ಕೆ ಮತ್ತೆ ನಿಯೋಗ ಹೋಗಿ ಮಾತನಾಡುವುದಾಗಿ ಹೇಳಿದರು.
ಕಾಂಗ್ರೆಸ್ ನಾಯಕರಾದ ಕೆ.ಗೋಕುಲ್ ದಾಸ್, ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ ಇದ್ದರು.