ಕಾಂಗ್ರೆಸ್ ಕಾರ್ಯಕರ್ತರ ಉಚ್ಚಾಟನೆ ಆದೇಶ ವಾಪಸ್- ಸಂತೋಷ ತಂದಿದೆ

0

ಕೆಪಿಸಿಸಿ ಸದಸ್ಯ ಎಚ್. ಎಂ. ನಂದಕುಮಾರ್ ಹೇಳಿಕೆ

ಸುಳ್ಯ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರ ಉಚ್ಚಾಟನಾ ಆದೇಶ ವಾಪಸ್ ಪಡೆದಿರುವ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕೆಪಿಸಿಸಿ ಸದಸ್ಯ ಎಚ್‌ಎಂ ನಂದಕುಮಾರ್ ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಸೋಲಿನ ಬಳಿಕದ ಬೆಳವಣಿಗೆಯಲ್ಲಿ ಸುಳ್ಯ ಬ್ಲಾಕ್ ಹಾಗೂ ಕಡಬ ಬ್ಲಾಕ್ ನ ಕೆಲವು ಪ್ರಮುಖರನ್ನು ಯಾವುದೇ ಸ್ಪಷ್ಟ ಕಾರಣ ನೀಡದೆ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಮಾಡಲಾಗಿತ್ತು.
ಇದಾದ ಬಳಿಕ ಈ ವಿಷಯದ ಕುರಿತು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ವರ ಬಳಿ ಹಲವಾರು ಬಾರಿ ನಾನು ಮತ್ತು ಪಕ್ಷದ ಮುಖಂಡರಾದ ಎಂ ವೆಂಕಪ್ಪ ಗೌಡರು ನಿರಂತರವಾಗಿ ಸಂಪರ್ಕದಲ್ಲಿದ್ದು ಉಚ್ಚಾಟನೆಯ ಆದೇಶದ ಬಗ್ಗೆ ಮರುಪರಿಶೀಲನೆ ನಡೆಸಿ ನಿಷ್ಠಾವಂತ ಕಾರ್ಯಕರ್ತರುಗಳನ್ನು ಮತ್ತೆ ಪಕ್ಷಕ್ಕೆ ಕರೆಸಿಕೊಳ್ಳಬೇಕೆಂದು ಮನವಿಗಳನ್ನು ಮಾಡುತ್ತಿದ್ದೆವು. ಇದಕ್ಕೆ ಸ್ಪಂದಿಸಿದ ಕೆಪಿಸಿಸಿ ಅಧ್ಯಕ್ಷರು ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷರಾದ ರೆಹಮಾನ್ ಖಾನ್ ರವರಿಗೆ ಸ್ಪಷ್ಟವಾಗಿ ಅಮಾನತು ಹಿಂಪಡೆಯಲು ನಿರ್ದೇಶನವನ್ನು ನೀಡಿದ್ದು ಕೆಲವು ಕಾರಣಗಳಿಂದ ವಿಳಂಬವಾಗಿತ್ತು. ಇದೀಗ ನೂತನವಾಗಿ ಉಸ್ತುವಾರಿ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಮಮತಾ ಗಟ್ಟಿಯವರು ಈ ವಿಷಯದ ಕುರಿತು ಕೆಪಿಸಿಸಿ ಅಧ್ಯಕ್ಷರಿಗೆ ಸಂಪೂರ್ಣ ಮನವರಿಕೆ ಮಾಡಿಕೊಟ್ಟಿದ್ದು ಅವರ ಮನವಿಯನ್ನು ಪರಿಗಣಿಸಿ ಉಚ್ಚಾಟನೆಗೊಳಿಸಿರುವ ಎಲ್ಲಾ ಕಾರ್ಯಕರ್ತರ ಉಚ್ಚಾಟನಾ ಆದೇಶವನ್ನು ಹಿಂಪಡೆದುಕೊಂಡಿರುವುದು ಸಂತಸ ತಂದಿದೆ.ಆದ್ದರಿಂದ ಸಹಕರಿಸಿದ ಮಮತಗಟ್ಟಿಯವರಿಗೂ ಆದೇಶ ಹೊರಡಿಸಿದ ಕೆ ಪಿ ಸಿ ಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರಿಗೂ ಕೃತಜ್ಞತೆಯನ್ನು ಸಲ್ಲಿಸುವುದಾಗಿ ನಂದಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.