ಅಯೋಧ್ಯೆ ರಾಮ ಜನ್ಮಭೂಮಿಯ ಪವಿತ್ರ ಮಂತ್ರಾಕ್ಷತೆ ಕೋಟೆ ದೇವಸ್ಥಾನಕ್ಕೆ ಆಗಮನ

0

ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿಯಲ್ಲಿ ಮುಂದಿನ ಜನವರಿ ತಿಂಗಳ 22 ರಂದು ಪ್ರಭು ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದ್ದು, ಪೂರ್ವಭಾವಿಯಾಗಿ ಅಯೋಧ್ಯಾ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಪವಿತ್ರ ಮಂತ್ರಾಕ್ಷತೆಯ ವಿತರಣಾ ಕಾರ್ಯಕ್ರಮದಲ್ಲಿ ಪ್ರತೀ ಬೂತ್ ಮಟ್ಟದಲ್ಲಿ ನಡೆಯುತ್ತಿದೆ. ಡಿ. 5ರಂದು ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಮಂತ್ರಾಕ್ಷತೆ ಮತ್ತು ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಆಮಂತ್ರಣ ತರಲಾಯಿತು. ದೇವಸ್ಥಾನ ಪ್ರದಕ್ಷಿಣೆ ಬಂದು ಬಳಿಕ ಒಳಭಾಗದಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಸೇರಿದ ಭಕ್ತಾದಿಗಳು ಶ್ರೀರಾಮ ತಾರಕ ಮಂತ್ರ ಪಠಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಹಕಾರ್ಯವಾಹ ಸುಭಾಶ್ಚಂದ್ರ ಅಯ್ಯನಕಟ್ಟೆ ಕಾರ್ಯಕ್ರಮದ ವಿವರ ನೀಡಿದರು. ಕಳಂಜ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪ್ರಶಾಂತ್ ಕುಮಾರ್ ಕಿಲಂಗೋಡಿ, ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆದಿಲ ನರಸಿಂಹ ಭಟ್ಟ, ಧರ್ಮದರ್ಶಿ ಹಾಗೂ ಪ್ರಧಾನ ಗೌರವ ಅರ್ಚಕರಾದ ವಾರಣಾಶಿ ಗೋಪಾಲಕೃಷ್ಣ, ಕಳಂಜ ಬಾಳಿಲ ಪ್ರಾ.ಕೃ.ಪ.ಸ. ಸಂಘದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ನಾಲ್ಗುತ್ತು, ನಿರ್ದೇಶಕ ಶುಭ ಕುಮಾರ್ ಬಾಳೆಗುಡ್ಡೆ, ಹೆಬ್ಬಾರ ಶಂಕರನಾರಾಯಣ ವಾರಣಾಶಿ, ಮಾಧವ ಗೌಡ ಅಯ್ಯನಕಟ್ಟೆ, ಶ್ರೀನಿಧಿ, ಅಜೇಯ ಕಿಲಂಗೋಡಿ, ಉಪ್ಪೇಂದ್ರ ಪ್ರಭು, ವಾರಣಾಶಿ ಸುಬ್ಬಪ್ಪಯ್ಯ, ಅನುಪಮ ಎಸ್. ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ನಡೆಯಲಿರುವ ರೀತಿ:

ಜನವರಿ 22 ಕ್ಕೆ ಅಯೋಧ್ಯೆಯಲ್ಲಿ ನಡೆಯುವ ರಾಮಲಲಾನ ಪ್ರಾಣ ಪ್ರತಿಷ್ಠೆಯ ಆಮಂತ್ರಣ ಅಯೋಧ್ಯೆಯಲ್ಲಿ ಪೂಜೆಗೊಂಡು, ಪ್ರಾಂತ, ಜಿಲ್ಲೆ, ತಾಲೂಕಿನ ಮುಖಾಂತರ ಪ್ರತೀ ಬೂತಿಗೆ ತಲುಪಿರುತ್ತದೆ. ಅದನ್ನು ಪ್ರತೀ ಬೂತ್ ಅಥವಾ ಗ್ರಾಮದ ದೇವಾಲಯಗಳಲ್ಲಿ ಇಡಲಾಗಿದ್ದು, ಡಿ. 31ರ ವರೆಗೆ ಪೂಜನ ಗೊಳ್ಳಲಿದೆ. ಜನವರಿ 1ರಂದು ಇಡೀ ಜಗತ್ತಿನಲ್ಲಿ ಮನೆ ಮನೆಗೆ ವಿತರಣೆ ಮಾಡುವ ಅಭಿಯಾನ ಪ್ರತೀ ಬೂತಿನಲ್ಲಿ ಉದ್ಘಾಟನೆಗೊಂಡು ಅಂದಿನಿಂದ ಪ್ರತಿ ದಿನ ಮನೆ ಮನೆಗಳಿಗೆ ವಿತರಣೆ ನಡೆದು, ಜ. 7ರಂದು ಮಹಾ ಅಭಿಯಾನದ ಮೂಲಕ ಎಲ್ಲಾ ಹಿಂದು ಮನೆಗಳನ್ನು ತಲುಪಿ ಮಂತ್ರಾಕ್ಷತೆ ವಿತರಣೆ ಮಾಡಲಾಗುವುದು. ಜ. 22ರಂದು ಎಲ್ಲಾ ದೇವಾಲಯ, ದೈವಸ್ಥಾನ, ಭಜನಾ ಮಂದಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಮ ಭಕ್ತರು ಸೇರಿ ಭಜನೆ ಸತ್ಸಂಗದೊಂದಿಗೆ ಅಯೋಧ್ಯೆಯ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಣೆ ಮಾಡುವ ಅವಕಾಶ, ಮಹಾ ಪೂಜೆ ನಂತರ ಭೋಜನ ವ್ಯವಸ್ಥೆ,
ಸಂಜೆ ಸೂರ್ಯಾಸ್ತದ ಸಂದರ್ಭದಲ್ಲಿ ಪ್ರತೀ ಮನೆಗಳಲ್ಲಿ ಕನಿಷ್ಠ 5 ದೀಪ ಅಥವಾ ಹಣತೆ ಉರಿಸಿ ಭಜನೆ ಕೊನೆಯಲ್ಲಿ ಉತ್ತರ ದಿಕ್ಕಿಗೆ ಮಂಗಳಾರತಿ ಮಾಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಹಕಾರ್ಯವಾಹ ಸುಭಾಶ್ಚಂದ್ರ ಅಯ್ಯನಕಟ್ಟೆ ಕಾರ್ಯಕ್ರಮದ ವಿವರಿಸಿದರು.